

ಹಾಸನ: ಸರ್ಕಾರದ ಆದೇಶದಂತೆ ಕರ್ನಾಟಕದಲ್ಲಿ ಶೇ.60ರಷ್ಟು ನಾಮಪಲಕದಲ್ಲಿ ಕನ್ನಡ ಇರಬೇಕು. ಆದರೆ ಅನೇಕರು ಈ ನಿಯಮ ಪಾಲಿಸುತ್ತಿಲ್ಲ. ಒಂದು ವೇಳೆ ಫೆ.28ರ ಒಳಗೆ ಮಾತೃ ಭಾಷೆ ಬಳಕೆ ಮಾಡದಿದ್ದರೇ ನಮ್ಮ ಸಂಘಟನೆಯಿಂದ ಅಂತಹ ನಾಮಫಲಕಗಳಿಗೆ ಮಸಿ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಕರವೇ ಜಿಲ್ಲಾ ಉಪಾಧ್ಯಕ್ಷ ಸೀತಾರಾಮು ಎಚ್ಚರಿಕೆ ನೀಡಿದರು.
ಕರ್ನಾಟಕ ರಕ್ಷಣ ವೇದಿಕೆಯ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ರೈಲ್ವೆ ನಿಲ್ದಾಣದ ಸಮೀಪ ಇರುವ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸಿ ಶೇ.60 ರಷ್ಟು ಕನ್ನಡ ಬಳಕೆ ಕಡ್ಡಾಯವಾಗಿ ಮಾಡಬೇಕು ಎನ್ನುವ ಬೃಹತ್ ಜನಜಾಗೃತಿ ಜಾಥಕ್ಕೆ ಚಾಲನೆ ನೀಡಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮವಾಗಬೇಕು. ಕನ್ನಡಿಗನಿಗೆ, ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು. ಯಾವುದೇ ಅನ್ಯಭಾಷೆಗಳು ಕರ್ನಾಟಕಕ್ಕೆ ಬಂದರೂ ಸಹ ಇಲ್ಲಿ ಕನ್ನಡದ ಭಾಷೆಯಲ್ಲಿ ವ್ಯವಹರಿಸಬೇಕು. ನಮ್ಮ ತಾಯಿಯನ್ನು ಗೌರವಿಸಿದ ಹಾಗೆ ತಾಯಿ ಭುವನೇಶ್ವರಿ ಕನ್ನಡ ಭಾಷೆಯನ್ನು ಗೌರವಿಸಬೇಕು. ಕನ್ನಡಕ್ಕೆ ಏನಾದರೂ ದಕ್ಕೆ ಬಂದಾಗ ನಮ್ಮ ವೇದಿಕೆ ಹೋರಾಟಕ್ಕೆ ಇಳಿಯಲಿದೆ ಎಂದರು.
ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೀತಂ ರಾಜ್ ಮಾತನಾಡಿ, ಈ ಹಿಂದೆ ಪ್ರತಿ ಅಂಗಡಿ ಮುಂಗಟ್ಟು ಬಳಿ ಹೋಗಿ ಗುಲಾಬಿ ನೀಡುವುದರ ಮೂಲಕ ಕನ್ನಡ ಭಾಷೆ ಬಳಕೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಇದುವರೆಗೂ ಇಂಗ್ಲಿಷ್ ಪದವನ್ನು ಬದಲಾಯಿಸಿಲ್ಲ. ಈ ರ‌್ಯಾಲಿ ಮೂಲಕ ಕನ್ನಡ ಬಳಸುವಂತೆ ಮನವಿ ಮಾಡಲಾಗುತ್ತಿದ್ದು, ಫೆ.28ರೊಳಗೆ ಕನ್ನಡ ನಾಮಫಲಕ ಹಾಕುವಂತೆ ಸರ್ಕಾರವೇ ಗಡುವು ನೀಡಿದೆ. ಫೆ. 28ನೇ ತಾರೀಖು ಪ್ರತಿ ಅಂಗಡಿಯ ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಬಳಕೆ ಇರಲೇಬೇಕು. ಏನಾದರೂ ನಮ್ಮ ಭಾಷೆ ಬಳಕೆ ಮಾಡದಿದ್ದರೇ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹೋರಾಟ ಮಾಡಲಿದ್ದಾರೆ. ಈಗಲೇ ಎಚ್ಚೆತ್ತುಕೊಂಡು ಸಂಬಂಧಪಟ್ಟ ಅಧಿಕಾರಿಗಳು, ನಗರಸಭೆ ಆಯುಕ್ತರು ಕೂಡಲೇ ಈ ಬಗ್ಗೆ ಗಮನ ನೀಡಿ ಯಾರ‌್ಯಾರು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ಅವರ ವ್ಯವಹಾರಕ್ಕೆ ನೀಡಲಾಗಿರುವ ಪರವಾನಗಿ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತನುಗೌಡ, ನಗರ ಅಧ್ಯಕ್ಷ ಶಿವಕುಮಾರ್, ತಾಲೂಕು ಅಧ್ಯಕ್ಷ ಶಿವಣ್ಣಗೌಡ, ಅಭಿಗೌಡ, ತೋಫಿಕ್, ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಸಮೀರ್ ಅಹಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.