

ಚನ್ನರಾಯಪಟ್ಟಣ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು, ಜು. 28ರವರೆಗೆ ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಏಕ ಬಳಕೆ ಪ್ಲಾಸ್ಟಿಕ್‌ನಿಂದ ಉಂಟಾಗುವ ದುಷ್ಟರಿಣಾಮ ಹಾಗೂ ಮಾಲಿನ್ಯ ಕುರಿತು ಸಾರ್ವಜನಿಕರಲ್ಲಿ ಅರಿವು ಮಾಡಿಸಲಾಗುತ್ತದೆ ಎಂದು ಪುರಸಭಾ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್‌ಕುಮಾರ್ ಮಾಹಿತಿ ನೀಡಿದರು.
ಕಿರಾಣಿ ವರ್ತಕರು ಹಾಗೂ ಬೀದಿಬದಿ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರೆ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬಹುದು, ಸಾರ್ವಜನಿಕರಿಗಿಂತಲೂ ಮೊದಲು ವ್ಯಾಪರಸ್ಥರಿಗೆ ಅರಿವು ಮೂಡಿಸುವ ಅವಶ್ಯಕ. ಇದರೊಂದಿಗೆ ಸುಸ್ಥಿರ ಮೂಲ ಸೌಕರ್ಯಗಳ ಅಭಿವೃದ್ಧಿ ಉತ್ತೇಜಿಸಿ, ಪ್ರೋತ್ಸಾಹಿಸಲು ಹಾಗೂ ಪರಿಸರ ಸ್ನೇಹಿ ಸಾಮಗ್ರಿ ಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಅಭಿಯಾನ ಯಶ್ವಸಿಗೊಳಿಸಬಹುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಬಗ್ಗೆ ವಿವಿಧ ವೇದಿಕೆ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು. ದಿನಪತ್ರಿಕೆ, ಸಾಮಾಜಿಕ ಜಾಲತಾಣ, ಇಲೆಕ್ಟ್ರಾನಿಕ್ ಮಾಧ್ಯಮ, ಧ್ವನಿವರ್ಧಕ, ಕರಪತ್ರ ಇತ್ಯಾದಿ ಮೂಲಗಳಿಂದ ಅರಿವು, ಪೌರಕಾರ್ಮಿಕರು ಮತ್ತು ಬೀದಿಬದಿ ಅಭಿಯಾನ ಕುರಿತು ತರಬೇತಿ, ಜಾಗೃತಿ ಕಾರ್ಯಕ್ರಮ. ಶಾಲೆ, ಕಾಲೇಜುಗಳಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕುರಿತು ಅರಿವು ಕಾರ್ಯಕ್ರಮ ಸೇರಿದಂತೆ ಪಟ್ಟಣದ 15 ಉದ್ದಿಮೆಗಳನ್ನು ಹಸಿರು (ಪರಿಸರ ಸ್ನೇಹಿ) ಸಂಸ್ಥೆಗಳನ್ನಾಗಿ ಘೋಷಿಸಲು ಗುರಿ ಹೊಂದಲಾಗಿದೆ ಎಂದು ಹೇಳಿದರು.