28ರಂದು ವಿದುರಾಶ್ವತ್ಥದಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

IMG-20220524-WA0114
Published on

ಗೌರಿಬಿದನೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿದುರಾಶ್ವತ್ಥದಲ್ಲಿ ಮೇ 28 ರಂದು ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ವಿದುರಾಶ್ವತ್ಥದಲ್ಲಿನ ವೀರಸೌಧ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುತಿಸಲಾದ ಆಯ್ದ 75 ಸ್ಥಳಗಳಲ್ಲಿ ಮಾ.28ರಂದು ಏಕಕಾಲದಲ್ಲಿ ಅಮೃತ ಮಹೋತ್ಸವ ನಡೆಯಲಿದ್ದು, ವಿದುರಾಶ್ವತ್ಥದಲ್ಲಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ವಿದುರಾಶ್ವತ್ಥದಲ್ಲಿ ಈಗಾಗಲೇ ಸ್ವಾತಂತ್ರ್ಯ ಹೋರಾಟಗಾರರ ಸ್ತೂಪಗಳು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಯಶೋಗಾಥೆ ಬಿಂಬಿಸುವ ಚಿತ್ರ ಗ್ಯಾಲರಿ ನಿರ್ಮಿಸಲಾಗಿದೆ. ಇದರಲ್ಲಿ ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಮೆಲುಕು ಹಾಕುವ ಚಿತ್ರಗಳಿವೆ. ಇಂತಹ ಐತಿಹಾಸಿಕ ಸ್ಥಳದಲ್ಲಿ ವಿನೂತನ ಮತ್ತು ವಿಶಿಷ್ಟ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಪಂ ಉಪ ಕಾರ್ಯದರ್ಶಿ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ತಹಸೀಲ್ದಾರ್ ಎಚ್.ಶ್ರೀನಿವಾಸ್ ಮತ್ತಿತರರು ಇದ್ದರು.

ಇಲಾಖೆಗೆ ಜವಾಬ್ದಾರಿ ಹಂಚಿಕೆ: ವಿದುರಾಶ್ವತ್ಥದಲ್ಲಿರುವ ಸ್ತೂಪಗಳಿಗೆ ಹೂವಿನ ಅಲಂಕಾರ ಮತ್ತು ಹುತಾತ್ಮರಿಗೆ ಗೌರವ ಸಮರ್ಪಣೆ, ವೇದಿಕೆ ಸಿದ್ಧತೆ, ಶಿಲಾಫಲಕ ಸ್ಥಾಪನೆ, ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ, ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳ ಪ್ರದರ್ಶನ, ಎನ್‌ಸಿಸಿ ವಿದ್ಯಾರ್ಥಿಗಳಿಂದ ಪಥಸಂಚಲನ, ವಿವಿಧ ಕಲಾತಂಡಗಳಿಂದ ಮೆರವಣಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಿಲ್ಲೆಯಲ್ಲಿನ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸಂಬಂಧಪಟ್ಟ ಇಲಾಖೆಗಳಿಗೆ ಜವಾಬ್ದಾರಿ ವಹಿಸಲಾಯಿತು.

ವಿವಿಧೆಡೆ ಭೇಟಿ, ಪರಿಶೀಲನೆ: ಎನ್.ಸಿ.ನಾಗಯ್ಯರೆಡ್ಡಿ ಸ್ಮಾರಕ ಧ್ವಜ ಸತ್ಯಾಗ್ರಹ ಸಭಾಂಗಣ, ವೀರ ಹುತಾತ್ಮರ ಸ್ತೂಪ, ಚಿತ್ರಪಟ ಗ್ಯಾಲರಿ, ವೀರ ಸೌಧ ಸೇರಿದಂತೆ ವಿವಿಧ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ಲತಾ ಭೇಟಿ ನೀಡಿ ಪರಿಶೀಲಿಸಿದರು. ಅಭಿವೃದ್ಧಿ ಮತ್ತು ಕಾರ್ಯಕ್ರಮದ ಯಶಸ್ವಿ ವಿಚಾರವಾಗಿ ಸಲಹೆ ಸೂಚನೆಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net