

ಚಿತ್ರದುರ್ಗ: ಪ್ರೊ.ಎಂ. ಗೋವಿಂದರಾವ್ ಅಧ್ಯಕ್ಷತೆಯ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಬೆಂಗಳೂರು ವಿಭಾಗ ಮಟ್ಟ ದ ಸಂವಾದ ಸಭೆ ಚಿತ್ರದುರ್ಗದಲ್ಲಿ ಏ.28ರಂದು ಬೆಳಗ್ಗೆ 11ಕ್ಕೆ ಜಿಪಂ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.
ಸಭೆ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತು ಮಕೂರು, ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂವಾದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
22 ವರ್ಷಗಳಷ್ಟು ಹಳೆಯ ಡಾ.ಡಿ.ಎಂ. ನಂಜುಂಡಪ್ಪ ವರದಿ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯದಲ್ಲಿದ್ದ 175 ತಾಲೂಕುಗಳ ಸಂಖ್ಯೆ ಈಗ 240ಕ್ಕೆ ಏರಿಕೆಯಾಗಿದೆ. ಹೀಗಾಗಿ ಕಳೆದ ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದಂತೆ ನಂಜುಂಡಪ್ಪ ವರದಿ ಅನುಷ್ಠಾನದಿಂದ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದದ ತಾಲೂಕುಗಳನ್ನು ಗುರುತಿಸಿ, ಹೊಸ ಸೂಚ್ಯಂಕದೊಂದಿಗೆ ಪ್ರಾದೇಶಿಕ ಅಸಮತೋಲನ ನಿವಾರಿಸಲು ಆರ್ಥಿಕ ತಜ್ಞ ಪ್ರೊ.ಎಂ. ಗೋವಿಂದರಾವ್ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದೆ.
ಈ ಸಮಿತಿ ಜಿಲ್ಲಾ ಹಂತದಲ್ಲಿ ಸಭೆ ನಡೆಸಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಉದ್ದಿಮೆದಾರರು, ವರ್ತಕರು ಮತ್ತು ಸಾರ್ವಜನಿಕರ ಮನವಿ, ಅಭಿಪ್ರಾಯ ಹಾಗೂ ಸಲಹೆ ಪಡೆಯಲು ಮುಂದಾಗಿದೆ. 28 ರಂದು ಚಿತ್ರದುರ್ಗದ ಸಭೆಯಲ್ಲಿ 4 ಜಿಲ್ಲೆಗಳ ಲೋಕಸಭೆ, ರಾಜ್ಯಸಭೆ ಸದಸ್ಯರು, ವಿಧಾನಸಭೆ, ವಿಧಾನಪರಿಷತ್ ಸದಸ್ಯರು, ಉನ್ನತ ಅಧಿಕಾರಿಗಳು, ಸಂಘ ಸಂಸ್ಥೆಗಳು, ಚೇಂಬರ್‌ಆಫ್ ಕಾಮರ್ಸ್ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮ ಇದಾಗಿದೆ. ಸಭೆ ಅತ್ಯಂತ ವ್ಯವಸ್ಥಿತವಾಗಿರಬೇಕು. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೂ ಪ್ರತ್ಯೇಕ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುವುದು ಎಂದರು.
ಸಮಿತಿ ಪ್ರಮುಖವಾಗಿ ಆಯಾ ಜಿಲ್ಲೆಯ ತಾಲೂಕುವಾರು ಅಭಿವೃದ್ಧಿ ಕುರಿತಂತೆ ಅಂಕಿ-ಅಂಶ ಸಂಗ್ರಹಣೆಗೆ ಹೆಚ್ಚು ಒತ್ತು ನೀಡಲಿದೆ. ಅಧಿಕಾರಿಗಳು ಆಯಾ ತಾಲೂಕು ವ್ಯಾಪ್ತಿ ಹಾಗೂ ಜಿಲ್ಲಾ ಮಟ್ಟದ ಜನಸಂಖ್ಯೆ, ಸಾಕ್ಷರತೆ ಪ್ರಮಾಣ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಗಳ ಅನುಷ್ಠಾನ, ಅನುದಾನ ಹಂಚಿಕೆ, ಖರ್ಚು-ವೆಚ್ಚಗಳ ವಿವರ, ರೋಗ್ಯ ಸೂಚ್ಯಂಕ, ವಿವಿಧ ಯೋಜನೆಗಳ ಅನುಷ್ಠಾನ ಸೇರಿ ಸಮಗ್ರ ವಿವರವನ್ನು ಪಿಪಿಟಿ ಮೂಲಕ ಸಭೆಗೆ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಸಿಪಿಒ ಗಾಯತ್ರಿ, ಎಸ್‌ಪಿ ರಂಜಿತ್‌ಕುಮಾರ ಬಂಡಾರು, ಎಡಿಸಿ ಬಿ.ಟಿ. ಕುಮಾರಸ್ವಾಮಿ ಮತ್ತಿತರರು ಇದ್ದರು.