

ಹಾಸನ: ಕೆಲ ತಿಂಗಳಿನಿಂದ ನಡೆಯುತ್ತಿರುವ ಹಾಸನ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಇದೇ ತಿಂಗಳ 28ಕ್ಕೆ ಹಾಲಿ ಅಧ್ಯಕ್ಷ ಎಂ. ಚಂದ್ರೇಗೌಡರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸ್ವಪಕ್ಷೀಯರಾದ ಜೆಡಿಎಸ್ ಸದಸ್ಯರು ಮುಂದಾಗಿದ್ದಾರೆ. ಜೆಡಿಎಸ್ ಸದಸ್ಯರಿಗೆ ಬಿಜೆಪಿ ಕೈಜೋಡಿಸಿದರೆ ಮಾತ್ರ ಅವಿಶ್ವಾಸ ನಿರ್ಣಯ ಪಾಸಾಗಲಿದೆ, ಇಲ್ಲವಾದಲ್ಲಿ ಚಂದ್ರೇಗೌಡರು ಅಧ್ಯಕ್ಷರಾಗಿ ಚಂದ್ರೇಗೌಡ ಅವರೇ ಮುಂದುವರಿಯಲಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಜೆಡಿಎಸ್ ಎಂ.ಚಂದ್ರೇಗೌಡ ಅವರನ್ನು ಶಾಸಕ ಸ್ವರೂಪ್ ಪ್ರಕಾಶ್ ಅವರ ಒತ್ತಾಯದ ಮೇರೆಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಅದು ಕೇವಲ ಮೂರು ತಿಂಗಳಿಗೆ ಮಾತ್ರ ಎಂದು ಗಡುವು ನಿಗದಿ ಮಾಡಲಾಗಿತ್ತು. ಆದರೆ, ಅದೇ ಸಮಯದಲ್ಲಿ ಹಾಸನಾಂಬ ಉತ್ಸವ ಬಂದಿದ್ದರಿಂದ ನಗರಸಭೆ ಅಧ್ಯಕ್ಷನಾಗಿ ಯಾವುದೇ ರೀತಿಯ ಕೆಲಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಇನ್ನು ಸ್ವಲ್ಪ ಅವಧಿಗೆ ಮುಂದುವರಿಸಬೇಕು ಎಂದು ಮುಖಂಡರ ಮನವೊಲಿಸಿದ್ದರು. ಆರು ತಿಂಗಳ ಬಳಿಕ ರಾಜೀನಾಮೆ ಕೇಳಿದಾಗ (ಕೆಲ ಘಟನೆಗಳ ಬಳಿಕ) ಆಗಲೂ ಇದೇ ಕಾರಣ ನೀಡಿ ಎಂ. ಚಂದ್ರೇಗೌಡ ಅವರು ರಾಜೀನಾಮೆ ನೀಡಲಿಲ್ಲ.
ಇದೇ ವಿಷಯವಾಗಿ ಜೆಡಿಎಸ್ ಮುಖಂಡ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು, ರಾಜೀನಾಮೆ ನೀಡದಿದ್ದರೆ ಹೇಗೆ ಒದ್ದು ಓಡಿಸುವುದು ಎಂಬುದು ನಮಗೆ ಗೊತ್ತು ಎಂದು ಗುಡುಗಿದ್ದರು. ಈ ಎಲ್ಲ ಬೆಳವಣಿಗಳ ಬಳಿಕ ಚಂದ್ರೇಗೌಡ ಅವರು ರಾಜೀನಾಮೆ ನೀಡಲು ಸುತಾರಾಂ ಒಪ್ಪದೆ ದೃಢ ನಿಶ್ಚಯ ತಳೆದಿದ್ದಾರೆ. ಈ ನಡುವೆ ಬಿಜೆಪಿ ಬಾಹ್ಯ ಬೆಂಬಲದೊಂದಿಗೆ ಕಳೆದ ವಾರ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಹೇಮಲತಾ ಕಮಲ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಇದರೊಂದಿಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಹೂರ್ತವನ್ನು ನಿಗದಿ ಮಾಡಲಾಗಿದೆ.
ಹಾಸನ ನಗರಸಭೆ 35 ಸದಸ್ಯರ ಸಂಖ್ಯಾ ಬಲವನ್ನು ಹೊಂದಿದೆ. ಇದರಲ್ಲಿ ಜೆಡಿಎಸ್ 17, ಬಿಜೆಪಿ 13, ಕಾಂಗ್ರೆಸ್ 2, ಪಕ್ಷೇತರರು 3 ಸ್ಥಾನವನ್ನು ಹೊಂದಿದೆ. ಇನ್ನು ಹಾಸನ ಸ್ಥಳೀಯ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಎಂಎಲ್‌ಸಿ ಸೂರಜ್ ರೇವಣ್ಣ, ಹಾಗೂ ಸಂಸದ ಶ್ರೇಯಸ್ ಪಟೇಲ್ ಅವರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ಪಾಸಾಗಲು ಜೆಡಿಎಸ್‌ಗೆ 26 ಮತಗಳ ಅವಶ್ಯಕತೆ ಇದೆ. ಅಧ್ಯಕ್ಷ ಎಂ.ಚಂದ್ರೇಗೌಡ ಅವರನ್ನು ಹೊರತುಪಡಿಸಿ, ಸದಸ್ಯರ 16 ಮತ, ಶಾಸಕ, ಎಂಎಲ್‌ಸಿ 2 ಮತಗಳು ಸೇರಿಸಿದರೆ 18 ಮತಗಳು ಜೆಡಿಎಸ್ ಪಾಲಿಗೆ ಗಟ್ಟಿಯಾಗಿವೆ. ಆದರೆ ನಿರ್ಣಯ ಗೆಲ್ಲಲು ಇನ್ನು 8 ಮತಗಳ ಅವಶ್ಯಕತೆ ಇದೆ. ಒಂದು ವೇಳೆ ಬಿಜೆಪಿ ಜೆಡಿಎಸ್‌ಗೆ ಬೆಂಬಲ ನೀಡಿದರೆ ಮಾತ್ರ ಅವಿಶ್ವಾಸ ನಿರ್ಣಯ ಗೆಲ್ಲಲಿದೆ. ಇಲ್ಲವಾದಲ್ಲಿ ಬಿದ್ದು ಹೋಗಲಿದೆ. ಜೆಡಿಎಸ್‌ನಲ್ಲಿಯೂ ಚಂದ್ರೇಗೌಡರಿಗೆ ಹಲವು ಸದಸ್ಯರು ಪರೋಕ್ಷವಾಗಿ ಬೆಂಬಲವಾಗಿ ಇದ್ದರೂ ಬಹಿರಂಗವಾಗಿ ಪರ ನಿಂತುಕೊಳ್ಳುವ ಧೈರ್ಯ ಮಾಡಲಾರರು. ಇನ್ನು ಕಾಂಗ್ರೆಸ್ ಹಾಗೂ ಪಕ್ಷೇತರರ ನಿಲುವು ಹೇಗಿದೆ ಎಂಬುದು ಅಂದಿನ ಸಭೆಯಲ್ಲಿಯೇ ತಿಳಿದುಕೊಳ್ಳಬೇಕು.
ತಮ್ಮ ಪಾಲಿಗೆ ಒಲಿದಿರುವ ಅಧ್ಯಕ್ಷ ಸ್ಥಾನವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಚಂದ್ರೇಗೌಡರು ಸಕಲ ರೀತಿಯಲ್ಲೂ ಕಸರತು ನಡೆಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರನ್ನು ಸ್ವತಃ ಭೇಟಿಯಾಗುತ್ತಿರುವ ಚಂದ್ರೇಗೌಡರು ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಈ ಎಲ್ಲ ಬಗೆಯ ಕಸರತು ವರ್ಕೌಟ್ ಆಗಲಿದೆಯೇ? ಇಲ್ಲವೇ? ಎಂಬುದು ಏ.28ರಂದು ತಿಳಿದು ಬರಲಿದೆ.