28ಕ್ಕೆ ವಿಜಯೇಂದ್ರರಿಗೆ ಅಭಿನಂದನಾ ಸಮಾರಂಭ

20230125133408_IMG_9757 copy
Published on


ಯಾದಗಿರಿ: ಶಹಾಪುರ ನಗರದಲ್ಲಿ ಅ.28 ರಂದು ಬಿಜೆಪಿ ಅದ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಬಿಜೆಪಿ ನೂತನ ಜಿಲ್ಲಾದ್ಯಕ್ಷ ಅಮೀನರಡ್ಡಿ ಯಾಳಗಿ ತಿಳಿಸಿದರು.

ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಆಯೋಜನೆ ಮಾಡಿದ್ದು, ಇದೇ ವೇಳೆ ನಾನು ಅಧಿಕೃತವಾಗಿ ಪದಗ್ರಹಣ ಮಾಡಲಿದ್ದೇನೆ. ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಪಕ್ಷ ನನಗೆ ಮಹತ್ವದ ಜಿಮ್ಮೆದಾರಿ ನೀಡಿದ್ದು, ಜಿಲ್ಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಬರುವ ಲೋಕಸಭೆ, ಜಿಪಂ, ತಾಪಂ ಮತ್ತು ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅಭ್ಯಥರ್ಿಗಳ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ರೀತಿ ಬಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡಲಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸುವುದು ಪಕ್ಷದ ಪ್ರತಿ ಕಾರ್ಯಕರ್ತರ ಗುರಿಯಾಗಿದೆ ಎಂದರು.

ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪಕ್ಷಕ್ಕೆ ವಾಪಸ್ ಆಗಿರುವುದು ನಮಗೆ ಆನೆಬಲ ಬಂದಂತಾಗಿದೆ. ಕಾಂಗ್ರೆಸ್ ಸೇರ್ಪಡೆಯಾದರೂ ಅವರಿಗೆ ಅಲ್ಲಿ ಸೂಕ್ತವಾಗಿ ನಡೆಸಿಕೊಂಡಿಲ್ಲ ಎಂದು ಶೆಟ್ಟರ್ ಅವರೇ ಹೇಳಿದ್ದಾರೆ. ಬರುವ ದಿನಗಳಲ್ಲಿ ಮತ್ತಷ್ಟು ನಾಯಕರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಅಲ್ಲದೆ, ಜಿಲ್ಲಾ ಮಟ್ಟದಲ್ಲಿ ಬೇರೆ ಪಕ್ಷದಿಂದ ನಾಯಕರು ಬಂದರೂ ಅವರಿಗೆ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net