

ಅರಕಲಗೂಡು: ತಾಲೂಕಿನ ರಾಮನಾಥಪುರ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಭಾನುವಾರ ಸಹಸ್ರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.
ರಜಾ ದಿನವಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು, ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಹಣ್ಣು, ತುಪ್ಪ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿ ಪುನೀತರಾದರು. ಅಲ್ಲದೆ ಪ್ರಮುಖ ಐತಿಹಾಸಿಕ ದೇವಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
28ರಂದು ರಥೋತ್ಸವ: ರಾಮನಾಥಪುರ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ಮಹಾ ರಥೋತ್ಸವ ಡಿ.28ರಂದು ಮಧ್ಯಾಹ್ನ 12ಕ್ಕೆ ಅಭಿಜನ್ ಮುಹೂರ್ತದಲ್ಲಿ ಜರುಗಲಿದೆ. ರಾತ್ರಿ ಬೆಳ್ಳಿ ಪಲ್ಲಕ್ಕಿ ಮತ್ತು ಬೆಳ್ಳಿ ರಥೋತ್ಸವ ನಡೆಯಲಿದೆ. 29ರಂದು ದೇವಸ್ಥಾನದಲ್ಲಿ ಹೊಸಳಿಗಮ್ಮನವವರಿಗೆ ವಿಶೇಷ ಪೂಜೆ ಏರ್ಪಡಿಸಲಾಗಿದೆ ಎಂದು ಪಾರುಪತ್ತೆದಾರ್ ರಮೇಶ್ ಭಟ್ ನೆಲ್ಲಿತೀರ್ಥ ತಿಳಿಸಿದ್ದಾರೆ.