

ನಂಜನಗೂಡು: ನಗರದ ಸಾರ್ವಜನಿಕರ ಆಶಯದಂತೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ. ನಾನು ಯಾವ ಪಕ್ಷ ಅನ್ನೋದು ಮುಖ್ಯವಲ್ಲ. ಜನರ ಸಮಸ್ಯೆಯನ್ನು ಬಗೆಹರಿಸುವುದು ನನ್ನ ಕರ್ತವ್ಯ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ನಂಜನಗೂಡು ನಗರದಲ್ಲಿ ಗುರುವಾರ ಭಾರ್ಗವಿ ಚಿತ್ರಮಂದಿರದ ಬಳಿ ಉದ್ದೇಶಿತ ರೈಲ್ವೆ ಮೇಲ್ಸೇತುವೆ ನಿರ್ಮಾಣ ಸಂಬಂಧ ಉಂಟಾಗಿದ್ದ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಸದ ಸುನೀಲ್ ಬೋಸ್, ಶಾಸಕ ದರ್ಶನ್ ಧ್ರುವನಾರಾಯಣ ಜತೆಗೂಡಿ ಸ್ಥಳ ಪರಿಶೀಲಿಸಿ ಮಾತನಾಡಿದರು.
ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ಎಲ್‌ಸಿ ಗೇಟ್‌ಗಳಿಗೆ ಸಂಬಂಧಿಸಿದಂತೆ ಸುಮಾರು ವರ್ಷಗಳಿಂದ ಸಮಸ್ಯೆಗಳು ಇವೆ. ಇದನ್ನು ಮನಗಂಡ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ನಂಜನಗೂಡಿನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಪರ-ವಿರೋಧಗಳು ಚರ್ಚೆ ನಡೆಯುತ್ತಿದ್ದವು. ರಸ್ತೆಗೆ ಸಂಬಂಧಿಸಿದಂತೆ ನೇರವಾಗಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿದೆ. ಇನ್ನು ಎರಡು ದಿನಗಳ ಒಳಗೆ ಈ ಬಗ್ಗೆ ತೀರ್ಮಾನವಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ರೈಲ್ವೆ ಅಂಡರ್ ಪಾಸ್‌ಗಳಲ್ಲೂ ಸಮಸ್ಯೆಗಳು ಇರುವ ಬಗ್ಗೆ ದೂರುಗಳು ಬಂದಿವೆ. ನಂಜನಗೂಡು ಸೇರಿದಂತೆ ರಾಷ್ಟ್ರಾದ್ಯಂತ ಹಲವೆಡೆ ಇಂತಹ ಸಮಸ್ಯೆಗಳು ಇವೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಸುಮಾರು 185 ಎಲ್‌ಸಿ ಗೇಟ್‌ಗಳ ಸಮಸ್ಯೆಗಳಿದ್ದವು. ಬೆಂಗಳೂರು ಒಂದರಲ್ಲಿ 75 ಎಲ್‌ಸಿ ಗೇಟ್‌ಗಳ ಸಮಸ್ಯೆ 25 ವರ್ಷಗಳಿಂದ ಉಳಿದಿದ್ದವು. ಈಗಾಗಲೇ ಈ ಸಮಸ್ಯೆಯನ್ನು ಬಗೆಹರಿಸಿದ್ದೇನೆ. ಅಭಿವೃದ್ಧಿಯೇ ನಮ್ಮ ಆದ್ಯ ಕರ್ತವ್ಯ. ತುಮಕೂರು, ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ಎಲ್ಲ ಎಲ್‌ಸಿ ಗೇಟ್‌ಗಳ ಮಾಹಿತಿ ಪಡೆಯಲಾಗಿದ್ದು, ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರ ಬುಧವಾರ ಜಿಎಸ್‌ಟಿ ಇಳಿಕೆ ಮಾಡಿ ಇತಿಹಾಸ ಸೃಷ್ಟಿಸಿದೆ. 391 ವಸ್ತುಗಳನ್ನು ಜಿಎಸ್‌ಟಿಯಿಂದ ಹೊರ ಇಟ್ಟಿದ್ದಾರೆ. ಜನಸಾಮಾನ್ಯರಿಗೆ ಸಂಬಂಧಿಸಿದಂತೆ ಜನಔಷಧ, ರೈತರ ಕೃಷಿ ಉಪಕರಣಗಳು ಸೇರಿದಂತೆ ಹಲವು ವಸ್ತುಗಳ ದರವನ್ನು ಕಡಿಮೆ ಮಾಡಿದ್ದಾರೆ. ಇದು ದಸರಾ ಮತ್ತು ದೀಪಾವಳಿಯ ಬಂಪರ್ ಕೊಡುಗೆಯಾಗಿದೆ ಎಂದರು.
ನಾನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ನೂರಾರು ಕೆರೆಗಳನ್ನು ತುಂಬಿಸುವ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರದ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಅವರು ಸಾಕಷ್ಟು ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.
ಕೋಣನೂರಿನಲ್ಲಿ ಸಿಗ್ನಲ್ ಅಳವಡಿಸಿ
ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ರೈಲ್ವೆ ಗೇಟ್‌ನಿಂದ ಶಾಲಾ ಮಕ್ಕಳು, ಗರ್ಭಿಣಿಯರಿಗೆ ತುಂಬಾ ತೊಂದರೆಯಾಗುತ್ತಿದೆ. ರೈಲು ಬರುವುದಕ್ಕಿಂತ ಒಂದು ಗಂಟೆ ಮುಂಚಿತವಾಗಿ ರೈಲ್ವೆ ಗೇಟ್ ಹಾಕುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗಿದೆ. ಕೋಣನೂರಿನಲ್ಲಿರುವ ಎರಡು ರೈಲ್ವೆ ಗೇಟ್‌ಗೆ ಸಿಗ್ನಲ್ ಅಳವಡಿಸಬೇಕು. ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು.
ಸೇತುವೆ ನಿರ್ಮಾಣ ಪರಿಶೀಲನೆಗೂ ಮುನ್ನ ವಿ.ಸೋಮಣ್ಣ ದಕ್ಷಿಣಕಾಶಿ ಶ್ರೀನಂಜುಂಡೇಶ್ವರ ಸ್ವಾಮಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀವತ್ಸ, ಮಾಜಿ ಶಾಸಕರಾದ ಬಿ. ಹರ್ಷವರ್ಧನ್, ಕಳಲೆ ಕೇಶವಮೂರ್ತಿ, ಬಾಲರಾಜ್, ಮಾಜಿ ಸಂಸದ ಪ್ರತಾಪಸಿಂಹ, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರ್, ಡಿವೈಎಸ್ಪಿ ರಘು, ಇನ್‌ಸ್ಪೆಕ್ಟರ್ ರವೀಂದ್ರ, ಸಂಚಾರ ಠಾಣೆಯ ಕೃಷ್ಣಕಾಂತ ಕೋಳಿ ಸೇರಿದಂತೆ ಹಲವು ಅಧಿಕಾರಿಗಳು ಮುಖಂಡರು ಇದ್ದರು.