ಜಿಲ್ಲೆಯಲ್ಲಿ 28,666 ವಿದ್ಯಾರ್ಥಿಗಳು ನೋಂದಣಿ

20 vikram 6A
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ. 21ರಿಂದ ಏ. 4ರವರೆಗೆ ನಡೆಯಲಿದ್ದು, ಪರೀಕ್ಷೆಯಲ್ಲಿ 14,502 ಗಂಡು ಮಕ್ಕಳು ಮತ್ತು 14,164 ಹೆಣ್ಣು ಮಕ್ಕಳು ಸೇರಿ ಒಟ್ಟು 28,666 ವಿದ್ಯಾರ್ಥಿಗಳು 106 ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಹುಬ್ಬಳ್ಳಿ ಶಹರದಲ್ಲಿ 8,492, ಧಾರವಾಡ ಶಹರ 5,343, ಧಾರವಾಡ ತಾಲೂಕು 3,871, ಹುಬ್ಬಳ್ಳಿ ತಾಲೂಕು 3,828, ಕಲಘಟಗಿ 2,577, ಕುಂದಗೋಳ 2,052 ಹಾಗೂ ನವಲಗುಂದ 2,503 ಸೇರಿ ಒಟ್ಟು 28,666 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.

ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶ ಸುಧಾರಣೆಗೆ ಪಣ ತೊಟ್ಟಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ವಿದ್ಯಾಕಾಶಿ ಮೂಲಕ ಜಿಲ್ಲೆಯ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದಾರೆ. ನಿರಂತರ 10 ತಿಂಗಳಿಂದ ಶಿಕ್ಷಕರು, ಪಾಲಕರು, ಸ್ಥಳಿಯ ಶಾಲಾ ಸಮಿತಿ, ಜನಪ್ರತಿನಿಧಿಗಳನ್ನು ಒಳಗೊಂಡು ಉತ್ತಮ ಶೈಕ್ಷಣಿಕ ವಾತಾವರಣ ರೂಪಿಸಿದ್ದಾರೆ.

ಜಿಲ್ಲೆಯ ಎಲ್ಲ ತಾಲೂಕಿಗೆ ಭೇಟಿ ನೀಡಿ ಪ್ರೌಢಶಾಲಾ ವಿದ್ಯಾರ್ಥಿಗಳೊ೦ದಿಗೆ ಮತ್ತು ಪಾಲಕರೊಂದಿಗೆ ಸಭೆ ಜರುಗಿಸಿ, ಸ್ವತಃ ತಮ್ಮ ಅನುಭವಗಳ ಮೂಲಕ ಪರೀಕ್ಷೆಗಳನ್ನು ಭಯವಿಲ್ಲದೆ ಹುರುಪು, ಹುಮ್ಮಸ್ಸಿನಿಂದ ಬರೆಯುವಂತೆ ಮಾಡಿದ್ದಾರೆ. ಪರೀಕ್ಷೆ ಮುನ್ನಾದಿನ ಎಲ್ಲ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಶುಭಾಶಯದ ಸಂದೇಶ ಪತ್ರ ಸಹ ಕಳುಹಿಸಿದ್ದಾರೆ.

ಗುರುವಾರ ಬೆಳಗ್ಗೆ ವರ್ಗ ಶಿಕ್ಷಕರು, ಮುಖ್ಯಾಧ್ಯಾಪಕರು ಜಿಲ್ಲಾಧಿಕಾರಿ ಪತ್ರವನ್ನು ಎಲ್ಲರ ಮನೆಗೆ ತೆರಳಿ ಶುಭಾಶಯ ಪತ್ರ ತುಲುಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net