

ಚಿಕ್ಕಮಗಳೂರು: ಜಿಲ್ಲೆಯ 286 ಕಿಮೀ ಜಿಲ್ಲಾ ಮುಖ್ಯರಸ್ತೆಗಳನ್ನು ರಾಜ್ಯ ಹೆದ್ದಾರಿಯಾಗಿ ಹಾಗೂ 655 ಕಿಮೀ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
10 ವರ್ಷಗಳಿಂದ ಗ್ರಾಮೀಣ ರಸ್ತೆಗಳನ್ನು ಜಿಲ್ಲಾಮಟ್ಟಕ್ಕೆ ಮೇಲ್ದರ್ಜೆಗೆ ಏರಿಸಬೇಕೆನ್ನುವ ಬೇಡಿಕೆ ಇತ್ತು. ಲೋಕೋಪಯೋಗಿ ಇಲಾಖೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 412 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಇದರಲ್ಲಿ ರಾಜ್ಯ ಹೆದ್ದಾರಿಗೆ 120 ಕೋಟಿ ಕಾಯ್ದಿರಿಸಲಾಗಿದೆ. ಜಿಲ್ಲೆಯ 94 ಕಿಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 401 ಕೋಟಿ ವೆಚ್ಚ ಮಾಡಲಾಗುತ್ತಿದೆ. 172 ರಸ್ತೆ ಸುಧಾರಣಾ ಕಾಮಗಾರಿಯನ್ನು 272 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಅದರನ್ವಯವೇ 503 ಕಿಮೀ ರಸ್ತೆ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ನಬಾರ್ಡ್‍ನಿಂದ 4.44 ಕೋಟಿ ವೆಚ್ಚದಲ್ಲಿ 4 ಪದವಿ ಪೂರ್ವ ಕಾಲೇಜು ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ಎರಡು ಕಟ್ಟಡಗಳು ಪೂರ್ಣಗೊಂಡಿವೆ. ಇನ್ನುಳಿದ ಕಾಮಗಾರಿ ನಡೆಯುತ್ತಿವೆ. 13 ಕೋಟಿ ವೆಚ್ಚದಲ್ಲಿ 51 ಅಂಗನವಾಡಿ ಕಟ್ಟಡ ನಿರ್ಮಿಸಲಾಗುತ್ತಿದ್ದು, 13 ಪೂರ್ಣಗೊಂಡಿವೆ. ನ್ಯಾಯಾಂಗ ಇಲಾಖೆಯ 4 ಕಟ್ಟಡಗಳಿಗೆ 27 ಕೋಟಿ ರೂ. ಹಾಗೂ 3 ಲೋಕೋಪಯೋಗಿ ಇಲಾಖೆಯ ಕಟ್ಟಡಗಳಿಗೆ 39 ಕೋಟಿ ವಿನಿಯೋಗಿಸಲಾಗುತ್ತಿದೆ. 186 ಕಾಲುಸಂಕಗಳ ನಿರ್ಮಾಣಕ್ಕೆ 36 ಕೋಟಿ ಒದಗಿಸಿದ್ದು, 104 ಕಾಮಗಾರಿಗಳು ಆರಂಭಗೊಂಡಿವೆ ಎಂದು ವಿವರಿಸಿದರು.
1850 ಕಾಮಗಾರಿ ಪೂರ್ಣ:
ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ ಅತಿವೃಷ್ಟಿಯಿಂದ 35 ಸಾವಿರ ಕೋಟಿ ರೂ. ನಷ್ಟವಾಗಿದೆ. ಇದರಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆ ಮತ್ತಿತರ ಆಸ್ತಿಪಾಸ್ತಿ ಹಾನಿಗೀಡಾಗಿ 7 ಸಾವಿರ ಕೋಟಿ ನಷ್ಟವಾಗಿದೆ. ತುರ್ತು ದುರಸ್ತಿಗೆ 500 ಕೋಟಿ ರೂ. ಬಿಡುಗಡೆ ಮಾಡಿ 1850 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
2020-21ನೇ ಸಾಲಿನಲ್ಲಿ ಮತ್ತೆ ಸಂಭವಿಸಿದ ಅತಿವೃಷ್ಟಿ, ಪ್ರವಾಹದಿಂದಾಗಿ ಒಟ್ಟು 25 ಸಾವಿರ ಕೋಟಿ ರೂ. ನಷ್ಟವಾಗಿದ್ದು, 1814 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇನ್ನೊಂದು ತಿಂಗಳಲ್ಲಿ ಅವು ಪೂರ್ಣಗೊಳ್ಳಲಿವೆ ಎಂದು ಹೇಳಿದರು. 2019-20ರಲ್ಲಿ ಲೋಕೋಪಯೋಗಿ ಇಲಾಖೆಗೆ ಲಭ್ಯವಿದ್ದ 9033 ಕೋಟಿ ರೂ. ಅನುದಾನದಲ್ಲಿ 8788 ಕೋಟಿ ರೂ. ವೆಚ್ಚ ಮಾಡಲಾಗಿದೆ. 20-21ನೇ ಸಾಲಿಗೆ 7030 ಕೋಟಿ ರೂ. ಮಾತ್ರ ಅನುದಾನ ಲಭ್ಯವಿದ್ದು, 4755 ಕೋಟಿ ರೂ. ವೆಚ್ಚವಾಗಿದೆ. ಮಾರ್ಚ್ ಅಂತ್ಯಕ್ಕೆ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 4,500 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗಿದ್ದು, 1510 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಕಾಂಗ್ರೆಸ್ ಒಡೆದ ಮನೆ:
ರಾಜ್ಯ ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಅದರಲ್ಲಿರುವ ಮೂರು ಗುಂಪುಗಳ ನಡುವಿನ ಕಚ್ಚಾಟದಲ್ಲೇ ಆ ಪಕ್ಷ ನೆಲಕಚ್ಚಿ ಹೋಗಲಿದೆ ಎಂದು ಅವರು ಲೇವಡಿ ಮಾಡಿದರು. ಮೈಸೂರು ಮೇಯರ್ ಆಯ್ಕೆ ಪ್ರಕ್ರಿಯೆ ವಿಚಾರದಲ್ಲಿ ಆ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ.ಶಿವಕುಮಾರ್ ಅವರ ಮೂರು ಗುಂಪುಗಳಿದ್ದು, 24 ಗಂಟೆಗಳ ಕಾಲ ಒಳಗುದ್ದಾಟ ನಡೆಯುತ್ತಿರುತ್ತದೆ. ಕಾಂಗ್ರೆಸ್‍ಗೆ ಇದು ಹೊಸತಲ್ಲ ಎಂದರು.
ಎಚ್‍ಡಿಕೆ ಹೇಳಿಕೆ ಹಾಸ್ಯಾಸ್ಪದ:
ರಾಜ್ಯದಲ್ಲಿ ಬಿಜೆಪಿಗೆ 2006ರಲ್ಲಿ ಜೀವದಾನ ನೀಡಿರುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಹಾಸ್ಯಾಸ್ಪದ. ಇಡೀ ದೇಶವೇ ಇವತ್ತು ಮೋದಿ ನಾಯಕತ್ವದಲ್ಲಿ ಬಿಜೆಪಿಯಾಗಿದೆ. 23 ರಾಜ್ಯಗಳಲ್ಲಿ ಬಿಜೆಪಿ ಅ„ಕಾರದಲ್ಲಿದೆ. ಹಾಗಿದ್ದರೆ ಅಲ್ಲೆಲ್ಲ ಕುಮಾರಸ್ವಾಮಿ ಅವರ ಆಶೀರ್ವಾದದಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬಿಜೆಪಿ ಸದೃಢವಾಗಿ ಬೆಳೆದಿದೆ ಎಂದರು.
2009ರಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇವತ್ತು ಹಾಗೆಯೇ ಆಗಿದೆ. ದೇಶದಲ್ಲಿ ಕಾಂಗ್ರೆಸ್ ಎಲ್ಲಿ ಉಳಿದಿದೆ. ಪಂಜಾಬ್ ಸೇರಿ ಅಲ್ಲಿ, ಇಲ್ಲಿ ಕೆಲವೆಡೆ ಮಾತ್ರ ಅಸ್ತಿತ್ವದಲ್ಲಿದೆ. ಇದೀಗ ಐದು ರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು ಅವುಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.