

ಮಂಡ್ಯ: ಜಿಲ್ಲಾಧಿಕಾರಿ ಡಾ.ಕುಮಾರ ಅವರು ಬುಧವಾರ ನಗರಸಭೆ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂತೆಯೇ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ ನಿಗದಿತ ಸಮಯದಲ್ಲಿ ನಿಯಮಾನುಸಾರ ಪರಿಶೀಲನೆ ನಡೆಸಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕಂದಾಯ ವಿಭಾಗಕ್ಕೆ ಭೇಟಿ ನೀಡಿ ಭೇಟಿ ನೀಡಿ ಎ ಖಾತೆ ಮತ್ತು ಬಿ ಖಾತೆ ನೀಡುವ ಬಗ್ಗೆ ಪ್ರಗತಿಯನ್ನು ಪರಿಶೀಲಿಸಿದರು. ಆದರೆ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿ, ಖಾತೆ ಪ್ರಮಾಣ ಪತ್ರವನ್ನು ಸಾರ್ವಜನಿಕರಿಗೆ ವಿತರಿಸುವ ಸಂಬಂಧ ಒಂದು ವಾರದಲ್ಲಿ ಒಂದು ವಾರ್ಡ್‌ನಂತೆ ಇ-ಖಾತಾ ಅಭಿಯಾನವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ವ್ಯಾಪಕವಾಗಿ ಪ್ರಚಾರ ಮಾಡುವಂತೆ ಸೂಚನೆ ನೀಡಿದರು.
ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಸಕಾಲ ಸೇವೆಯಲ್ಲಿ ಬರುವಂತಹ ಸಾರ್ವಜನಿಕ ಸೇವೆಗಳನ್ನು ನಿಗದಿತ ಅವಧಿಯಲ್ಲಿ ನೀಡಬೇಕು. ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ವಿಲೇವಾರಿಗೊಳಿಸುವ ಸಂಬಂಧ ಕ್ರಮ ವಹಿಸಬೇಕು. ನಗರಸಭೆ ವತಿಯಿಂದ ಹೊಸದಾಗಿ ನಿರ್ಮಿಸುತ್ತಿರುವ ಮಾರುಕಟ್ಟೆ ಸಂಬಂಧ ಸೂಕ್ತ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ತಯಾರಿಸಿ ಸಲ್ಲಿಸಬೇಕು. ಮುಖ್ಯವಾಗಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ನಿಗಧಿತ ಅವಧಿಯಲ್ಲಿ ನಿಯಮಾನುಸಾರ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಪೌರಾಯುಕ್ತೆ ಪಂಪಾಶ್ರೀ ಇತರರಿದ್ದರು.