

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದೆ. ಜಿಲ್ಲಾಡಳಿತದ ನಿಯಂತ್ರಣಕ್ಕೂ ಸಿಗದೆ ಏರಿಕೆಯಾಗುತ್ತಿದ್ದು ಶುಕ್ರವಾರ ಬರೋಬ್ಬರಿ 280 ಪಾಸಿಟಿವ್ ಪ್ರಕರಣ ವರದಿಯಾಗಿದೆ.
ತುಮಕೂರು ತಾಲೂಕಿನಲ್ಲಿ 125 ಜನರಿಗೆ ಸೋಂಕು ದೃಢವಾಗಿದ್ದು ಅಧಿಕಾರಿಗಳು ಕೈಚೆಲ್ಲಿದ್ದಾರೆ, ಜನರು ಭಯ ತೊರೆದು ಓಡಾಡಲು ಆರಂಭಿಸಿದ್ದು ಸಾವಿರಾರು ಪ್ರಕರಣಗಳು ಪರೀಕ್ಷೆಗೂ ಒಳಪಡದೆ ಸ್ವಯಂ ಚಿಕಿತ್ಸೆ ಪಡೆಯಲಾರಂಭಿಸಿರುವುದು ಆತಂಕ ಹೆಚ್ಚಿಸಿದೆ. 111 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಗುಬ್ಬಿ ತಾಲೂಕು ಸಿ.ಎಸ್.ಪುರದ 48 ವರ್ಷದ ಮಹಿಳೆ, ಮಧುಗಿರಿ ತಾಲೂಕು ಹನುಮಂತಪುರದ 84 ವರ್ಷದ ವ್ಯಕ್ತಿ ಮಹಾಮಾರಿ ಕೋವಿಡ್ 19ಗೆ ಬಲಿಯಾಗಿದ್ದಾರೆ. ಜತೆಗೆ ಕರೊನಾ ಹೊರತಾಗಿ ಅನ್ಯಕಾರಣಕ್ಕೆ ನಾಲ್ವರು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಶುಕ್ರವಾರ 100 ಮಹಿಳೆಯರು ಹಾಗೂ 180 ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಐದು ವರ್ಷದೊಳಗಿನ ಐವರು ಮಕ್ಕಳು, 60 ವರ್ಷ ಮೇಲ್ಪಟ್ಟ 46 ಜನರಿದ್ದಾರೆ. ಸೋಂಕಿತರ ಪೈಕಿ 215 ಜನರಿಗೆ ರೋಗ ಲಕ್ಷಣಗಳಿಲ್ಲ. ಇನ್ನುಳಿದ 65 ಜನರಲ್ಲಿ ಸಣ್ಣಪುಟ್ಟ ನೆಗಡಿ, ಕೆಮ್ಮು, ಜ್ವರ ಒಂದೆರಡು ದಿನಕ್ಕಷ್ಟೇ ಸೀಮಿತವಾಗಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5297ಕ್ಕೇರಿದ್ದು ಸಕ್ರಿಯ ಪ್ರಕರಣಗಳು 1403, ಈವರೆಗೆ 3737 ಜನರು ರೋಗಮುಕ್ತರಾಗಿದ್ದು ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 19 ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 33 ಒಟ್ಟು 52 ಜನರು ತೀವ್ರ ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಚಿಕ್ಕನಾಯಕನಹಳ್ಳಿ 16, ಗುಬ್ಬಿ 5, ಕೊರಟಗೆರೆ 16, ಕುಣಿಗಲ್ 22, ಮಧುಗಿರಿ 8, ಪಾವಗಡ 40, ಶಿರಾ ಹಾಗೂ ತಿಪಟೂರು ತಲಾ 18, ತುಮಕೂರು 125 ಮತ್ತು ತುರುವೇಕೆರೆ 12 ಸೇರಿ ಒಟ್ಟು 280 ಜನರಿಗೆ ಕರೊನಾ ವಕ್ಕರಿಸಿದೆ.
ಸ್ವಯಂ ಚಿಕಿತ್ಸೆ ಪಡೆಯುವವರೇ ಜಾಸ್ತಿ!: ರೋಗ ಲಕ್ಷಣಗಳು ಕಾಣಿಸಿದ ಕೂಡಲೇ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಪರೀಕ್ಷೆ ನಡೆಸಿದರೆ ಮನೆಯ ಮುಂದೆ ಬೋರ್ಡ್ ಹಾಕುತ್ತಾರೆ, ಆಸ್ಪತ್ರೆಗೆ ಸೇರಬೇಕು ಎಂಬ ಕಾರಣಕ್ಕೆ ರೋಗಿಗಳೇ ಸ್ವಯಂ ಚಿಕಿತ್ಸೆಗೆ ಮುಂದಾಗುತ್ತಿರುವುದು ಆತಂಕಕ್ಕೀಡು ಮಾಡಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸೋಂಕಿತರ ಮನೆಯನ್ನು ಸೀಲ್‌ಡೌನ್ ಮಾಡುವುದನ್ನು ನಿಲ್ಲಿಸಲಾಗಿದ್ದು ಕೆಂಪು ಬೋರ್ಡ್ ಹಾಕಲಾಗುತ್ತಿದೆ, ಮನೆಯಲ್ಲಿಯೇ ಒಂಟಿಯಾಗಿರಲು ಅವಕಾಶ ನೀಡಲಾಗಿದ್ದು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ, ಪಡೆಯಬೇಕು ಎಂದು ಜಿಲ್ಲಾಡಳಿತ ಮನವಿ ಮಾಡುತ್ತಿದೆ. ಕರೊನಾ ಸೋಂಕಿತರ ಸಂಖ್ಯೆ ಅಧಿಕೃತಕ್ಕಿಂತ ಅನಧಿಕೃತವಾಗಿರುವವರೇ ಜಾಸ್ತಿ ಎಂಬ ಮಾತು ಸಾರ್ವಜನಿಕರಲ್ಲಿದೆ.