

ಮೈಸೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಜಿಲ್ಲೆಯಲ್ಲಿ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನಕ್ಕೆ ಅ.28ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಆರ್.ಪೂರ್ಣಿಮಾ ತಿಳಿಸಿದರು.
ಜಿಲ್ಲಾ ಪಂಚಾಯಿತಿಯ ಡಾ.ದೇವರಾಜ ಅರಸು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮೃತ್ತಿಕಾ ಸಂಗ್ರಹ ಅಭಿಯಾನ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ಲೋಕಾರ್ಪಣೆ ಮಾಡಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನ ನಡೆಯಲಿದ್ದು ಜಿಲ್ಲೆಯಲ್ಲಿ ಈ ಸಂಬಂಧ ಅಧಿಕಾರಿಗಳು ಸಿದ್ಧತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯದ ಪ್ರತಿ ಜಿಲ್ಲೆಗಳಿಂದ ಮಣ್ಣು ಸಂಗ್ರಹ ಅಭಿಯಾನ ಯಶಸ್ವಿಗೆ ಸಮಿತಿ ರಚಿಸಲಾಗಿದೆ.ಅ.28ರಿಂದ ನವೆಂಬರ್ 7 ರವರೆಗೆ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಾಹನ ಸಂಚರಿಸಲಿದೆ ಎಂದು ಹೇಳಿದರು.
ಮಣ್ಣು ಸಂಗ್ರಹಣೆಗಾಗಿ 3 ವಾಹನಗಳು ಜಿಲ್ಲೆಗೆ ಆಗಮಿಸಿದ್ದು ಅಂದು ಬೆಳಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ಕುಂಭಮೇಳ ಕಳಸದೊಂದಿಗೆ ವಾಹನಗಳಿಗೆ ಚಾಲನೆ ನೀಡಲಾಗುವುದು. ಮೈಸೂರು, ತಿ.ನರಸೀಪುರ, ನಂಜನಗೂಡು ಮಾರ್ಗದಲ್ಲಿ ಚಲಿಸಲಿದ್ದು ಎರಡನೇ ವಾಹನ ಹುಣಸೂರು, ಎಚ್.ಡಿ.ಕೋಟೆ, ಸರಗೂರು ಮಾರ್ಗದಲ್ಲಿ ಹಾಗೂ ಮೂರನೇ ವಾಹನ ಕೆ.ಆರ್.ನಗರ, ಪಿರಿಯಾಪಟ್ಟಣ ಮಾರ್ಗದಲ್ಲಿ ಮಣ್ಣು ಸಂಗ್ರಹಣೆ ಮಾಡಿಕೊಂಡು ನಂತರ ಕೊಡಗು ತಲುಪುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಪ್ರೇಮ್‌ಕುಮಾರ್, ಕೃಷ್ಣರಾಜಂ ಇತರರು ಇದ್ದರು.