

ಚಿತ್ರದುರ್ಗ: ಮುರುಘಾಮಠದಿಂದ ಸೆ.25 ರಿಂದ ಅಕ್ಟೋಬರ್ 3 ರವರೆಗೆ ಹಮ್ಮಿಕೊಂಡಿರುವ ಶರಣ ಸಂಸ್ಕೃತಿ ಉತ್ಸವದ ಅರ್ಥಪೂರ್ಣ ಆಚರಣೆಗೆ ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸೋಮವಾರ ಶ್ರೀ ಮಠದಲ್ಲಿ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಮುದಾಯಗಳ ಮುಖಂಡರ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಶಾಲಾ, ಕಾಲೇಜುಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಸಭೆ ಜರುಗಿತು.
ಈ ವೇಳೆ ಮಾತನಾಡಿದ ಶ್ರೀಗಳು, ಚಿತ್ರದುರ್ಗದಲ್ಲಿ ಸೆ.16ಕ್ಕೆ ನಿಗದಿಯಾಗಿದ್ದ ಬಸವಸಂಸ್ಕೃತಿ ಅಭಿಯಾನವನ್ನು ಸೆ.28ರಂದು ಹಮ್ಮಿಕೊಳ್ಳಲಾಗಿದೆ. ವಚನ ಝೇಂಕಾರ ಹೆಸರಿನಡಿ ನಾಲ್ಕೈದು ಸಾವಿರ ಶರಣ-ಶರಣೆಯರು ವಚನಗಾಯನ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಎಸ್‌ಜೆಎಂ ವಿದ್ಯಾಪೀಠದ ಶಾಲಾ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸೆ.21ರಿಂದ 3 ದಿನಗಳ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಯೋಗಗುರು ಚನ್ನಬಸವಣ್ಣ ಅವರಿಂದ 20 ರಿಂದ 28ರವರೆಗೆ ಹಾಗೂ 29 ರಿಂದ ಶ್ರೀ ವಚನಾನಂದ ಸ್ವಾಮೀಜಿ ಅವರಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ. ಉತ್ಸವದ ಸಂದರ್ಭದಲ್ಲಿ ನಿತ್ಯ ರಾಜಾಂಗಣದಲ್ಲಿ ಸಹಜ ಶಿವಯೋಗ ಹಮ್ಮಿಕೊಳ್ಳಲಾಗಿದೆ.
ವಿಚಾರಸಂಕಿರಣ, ವಿವಿಧ ಗೋಷ್ಠಿಗಳು, ಹಾಸ್ಯಸಂಜೆ, ಕೃಷಿ, ಆರೋಗ್ಯ, ಜಾನುವಾರ ಮೇಳ, ಜಾನಪದ ಉತ್ಸವ, ಪೀಠಾರೋಹಣ, ಜಂಗೀಕುಸ್ತಿ, ಎಸ್‌ಜೆಎಂ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರ ಸಮಾವೇಶ, ವಚನಕಮ್ಮಟ ಪರೀಕ್ಷೆಗಳ ರ‌್ಯಾಂಕ್‌ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ, ಸಾಕುಪ್ರಾಣಿಗಳ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ಹೇಳಿ ದರು.
ನಾಳೆ ಪೂರ್ವಭಾವಿ ಸಭೆ: ಉತ್ಸವದ ವಿವಿಧ ಗೋಷ್ಠಿಗಳನ್ನು ಅರ್ಥಪೂರ್ಣವಾಗಿ ಆಯೋಜಿಸುವ ಸಂಬಂಧ ಸೆ.4ರಂದು ಮಧ್ಯಾಹ್ನ 12 ಕ್ಕೆ ಎಸ್‌ಜೆಎಂ ವಿದ್ಯಾಪೀಠದ ಶಾಲಾ, ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರೊಂದಿಗೆ, ಮಧ್ಯಾಹ್ನ 1 ಕ್ಕೆ ಜಯದೇವ ಜಂಗೀಕುಸ್ತಿ ಹಾಗೂ ಸಂಜೆ 4ಕ್ಕೆ ಕೃಷಿ ಮೇಳ ಕುರಿತಾದ ಪೂರ್ವಭಾವಿ ಸಭೆಗಳನ್ನು ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
--------