

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಕಲ್ಯಾಣ ಕರ್ನಾಟಕದ ಮಹತ್ವಾಕಾಂಕ್ಷಿ ಮುನಿರಾಬಾದ್-ಮಹೆಬೂಬ್ ನಗರ ರೈಲ್ವೆ ಯೋಜನೆಗೆ ಸಿಂಧನೂರು - ರಾಯಚೂರು ಮಧ್ಯೆ 81 ಕಿಮೀ ಮಾತ್ರ ಬಾಕಿಯಿದ್ದು ಕೇಂದ್ರ ರಾಜ್ಯದ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಮೇ 15 ರಂದು ಅಡಿಗಲ್ಲು ಹಾಕಲಿದ್ದು, ಈ ಮೂಲಕ ಶೀಘ್ರ ಕನಸು ನನಸಾಗುವ ಸಾಧ್ಯತೆಯಾಗಿದೆ. ಈ ಮಾರ್ಗ ಪೂರ್ಣಗೊಂಡಲ್ಲಿ ಹೈದರಾಬಾದ್‌ನಿಂದ ಗೋವಾಕ್ಕೆ ತೆರಳಲು ನೇರ ರೈಲು ಸಂಪರ್ಕ ಲಭ್ಯವಾಗಲಿರುವುದರಿಂದ ಪ್ರಯಾಣಿಕರಿಗೆ ಖುಷಿ ತರಲಿದೆ.
1997 ರಲ್ಲಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹತ್ವಾಕಾಂಕ್ಷಿ ಮುನಿರಾಬಾದ್ -ಮಹೆಬೂಬ್ ನಗರ ರೈಲ್ವೆ ಯೋಜನೆಗೆ ಚಾಲನೆ ನೀಡಿ ಆರಂಭದಲ್ಲಿ 3543 ಕೋಟಿ ರು. ವೆಚ್ಚದ ಅಂದಾಜಿನೊಂದಿಗೆ ಯೋಜನೆ ಆರಂಭ ಮಾಡಿದರು. ಆದರೆ ಕಾಮಗಾರಿ ನಿಧಾನವಾಗಿದ್ದರಿಂದ ನಿರ್ಮಾಣ ವೆಚ್ಚದ ಪ್ರಮಾಣ ಸಾಕಷ್ಟು ಏರಿಕೆ ಕಂಡು 28 ವರ್ಷದ ನಂತರ ಇವಾಗ ಅಡಿಗಲ್ಲು ಹಾಕಲು ಸರ್ಕಾರ ಮುಂದಾಗಿದೆ.
ಭೂ ಸ್ವಾದೀನ ಫೂರ್ಣ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶೇ.50ರ ವೆಚ್ಚದಲ್ಲಿ 2,559.67 ಕೋಟಿ ರೂ. ಅಂದಾಜು ವೆಚ್ಚ ತಯಾರಿಸಲಾಗಿತ್ತು. ಗಿಣಿಗೇರಾ-ರಾಯಚೂರುವರೆಗೆ 1,533 ಎಕರೆ ಭೂಸ್ವಾಧೀನ ಪೈಕಿ ರಾಯಚೂರು ಜಿಲ್ಲೆಯ ಕೊಪ್ಪಳ ಜಿಲ್ಲೆಯ 1,107 ಎಕರೆ, ರಾಯಚೂರು ಜಿಲ್ಲೆಯ 426 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಂಡಿದ್ದು, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವರೆಗೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ರೈಲ್ವೆ ಹಳಿ ಜೋಡಣೆ ಕಾರ್ಯ ಪೂರ್ಣಗೊಳಿಸಿ ರೈಲು ಸಂಚಾರ ಆರಂಭವಾಗಿದೆ. ಸಿಂಧನೂರು-ಹುಬ್ಬಳ್ಳಿಗೆ ಎರಡು ರೈಲು ಹಾಗೂ ಕಾರಟಗಿ -ಬೆಂಗಳೂರಿಗೆ ಒಂದು ರೈಲು ಸಂಚರಿಸುತ್ತಿವೆ. ಇದರ ಜತೆಗೆ ಇತ್ತಿಚ್ಚಿಗೆ ಸಿಂಧನೂರಿನಿಂದ ರಾಯಚೂರು ವರೆಗಿನ ಒಟ್ಟು 81 ಕಿಮೀ.ಗೆ ಸುಮಾರು 200 ಕ್ಕೂ ಅಧಿಕ ಭೂಮಿಯಲ್ಲಿ ಸರ್ಕಾರ ಈಗಾಗಲೇ ಸ್ವಾಧೀನ ಪಡಿಸಿಕೊಂಡು ಒಟ್ಟು 204 ಕೋಟಿ ರೂ. ಪರಿರಿಹಾರ ನೀಡಲಾಗಿದೆ.
ಎಷ್ಟು ಕಿ.ಮೀ. ಸಂಚಾರ
ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಮುನಿರಾಬಾದ್ -ಮಹೆಬೂಬ್ ನಗರ ರೈಲ್ವೆ ಯೋಜನೆಯು ಒಟ್ಟು 274 ಕಿಮೀ ವರೆಗೆ ಹಳಿ ಜೋಡಣೆಯಾಗಲಿದೆ. ಇದರಲ್ಲಿ ಒಟ್ಟು 32 ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ. ಈ ಪೈಕಿ ರಾಜ್ಯದಲ್ಲಿ 21 ನಿಲ್ದಾಣಗಳು ಹಾಗೂ ತೆಲಂಗಾಣದಲ್ಲಿ 11 ನಿಲ್ದಾಣಗಳು ನಿರ್ಮಾಣವಾಗಲಿವೆ. ಇದರಿಂದ ತೆಲಂಗಾಣ- ಕರ್ನಾಟಕದ ಮಧ್ಯೆ ಸಂಪರ್ಕದ ಕೊಂಡಿಯಾಗುವ ಯೋಜನೆ ಇದಾಗಿದೆ.
ಸದ್ಯ ಮುನಿರಾಬಾದ್ ಮಹೆಬೂಬ್ ನಗರ ರೈಲು ಮಾರ್ಗವು ದೇಶದಲ್ಲೇ ಸುದೀರ್ಘ ಅವಧಿಯಿಂದ ಜಾರಿಯಲ್ಲಿರುವ ರೈಲ್ವೆ ಯೋಜನೆ ಎಂದು ಕುಖ್ಯಾತಿಯಾಗಿದೆ. 1997 ರಲ್ಲಿ ಆರಂಭವಾದ ಯೋಜನೆ ಸದ್ಯ ತೆಲಂಗಾಣದ ಮಹೆಬೂಬನಗರದಿಂದ ಕೃಷ್ಣಾ ನಿಲ್ದಾಣದ ವರೆಗೆ ಮಾರ್ಗ ನಿರ್ಮಾಣ ಮುಗಿದಿದೆ. ಅದೇ ರೀತಿ ಮುನಿರಾಬಾದ್‌ನಿಂದ ಸಿಂಧನೂರುವರೆಗೆ ನಿರ್ಮಾಣ ಮುಗಿದು ರೈಲು ಸಂಚಾರ ಆರಂಭಗೊಂಡಿದೆ. ಕಳೆದ 28 ವರ್ಷದಿಂದ ಕುಂಟುತ್ತಲೇ ಸಾಗಿದ ಯೋಜನೆ ಇದೀಗ ಅಂತಿಮ ಘಟ್ಟದಲ್ಲಿದೆ.
ತೆಲಂಗಾಣದಿಂದ 2017 ರಲ್ಲಿ ಕಾಮಗಾರಿ ಮುಗಿಸಿದೆ
ದಕ್ಷಿಣ ಮಧ್ಯ ರೈಲ್ವೆಯು 2017ರಲ್ಲಿ ತೆಲಂಗಾಣ ಭಾಗದಲ್ಲಿನ ಮಾಗನೂರು- ಕೃಷ್ಣಾ ಜಂಕ್ಷನ ಮಧ್ಯದ ಕಾಮಗಾರಿ ಪೂರ್ಣಗೊಳಿಸಿದ್ದು, ಆದರೆ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಗಿಣಿಗೇರಾದಿಂದ ಗಂಗಾವತಿ ಮಾರ್ಗ 2019ರಲ್ಲೇ ಮುಗಿದು ರೈಲು ಸಂಚಾರ ಆರಂಭಿಸಲಾಯಿತು. 2021 ರ ವೇಳೆಗೆ ಕಾರಟಗಿ ವರೆಗೆ ಆನಂತರ ಕಳೆದ ಲೋಕಸಭೆ ಚುನಾವಣೆ ವೇಳೆಗೆ ಸಿಂಧನೂರುವರೆಗೆ ಕಾಮಗಾರಿ ಪೂರ್ಣಗೊಂಡು ಬೆಂಗಳೂರು ಹಾಗೂ ಹುಬ್ಬಳ್ಳಿ ಗೆ ರೈಲು ಸಂಚರಿಸುತ್ತಿವೆ.ಕೇಂದ್ರ ಸರ್ಕಾರವು 2025 ರ ಅಂತ್ಯದೊಳಗೆ ಯೋಜನೆ ಪೂರ್ಣಗೊಳಿಸುವ ಸಾಧ್ಯತೆ ಇದ್ದು. ಈ ಮಾರ್ಗ ಪೂರ್ಣಗೊಂಡಲ್ಲಿ ಹೈದರಾಬಾದ್‌ನಿಂದ ಗೋವಾಕ್ಕೆ ತೆರಳಲು ನೇರ ರೈಲು ಸಂಪರ್ಕ ಲಭ್ಯವಾಗಲಿದೆ.
ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸುವ ಕಲ್ಯಾಣ ಕರ್ನಾಟಕದ ಮಹತ್ವಾಕಾಂಕ್ಷಿ ಮುನಿರಾಬಾದ್ -ಮಹೆಬೂಬ್ ನಗರ ರೈಲ್ವೆ ಯೋಜನೆಗೆ ಸಿಂಧನೂರಿಂದ ರಾಯಚೂರು ಮಧ್ಯೆ 81 ಕಿಮೀ ವರೆಗೆ ಸುಮಾರು 200 ಕ್ಕೂ ಅಧಿಕ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸರ್ಕಾರದಿಂದ ಒಟ್ಟು 204 ಕೋಟಿ ರೂ. ಅನುದಾನವನ್ನು ರೈತರಿಗೆ ಪರಿಹಾರ ನೀಡಲಾಗಿದೆ. ಶೃತಿ ಪಾಟೀಲ್ ವಿಶೇಷ ಭೂ ಸ್ವಾಧೀನ ಅಧಿಕಾರಿ ಸಿಂಧನೂರು