

ಮೈಸೂರು: ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಜೆ.ಪಿ.ನಗರದ ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಈಜು ಸ್ಪರ್ಧಿಗಳು 28 ಪದಕಗಳನ್ನು ಬಾಚಿಕೊಂಡು ಗಮನ ಸೆಳೆದಿದ್ದಾರೆ.
ಕರ್ನಾಟಕ ಈಜು ಸಂಸ್ಥೆ ಬೆಂಗಳೂರಿನ ಬಸವನಗುಡಿಯಲ್ಲಿ 7ರಿಂದ 11 ಜುಲೈ 2024-25 ರವರೆಗೆ ಹಮ್ಮಿಕೊಂಡಿದ್ದ ಎನ್‌ಆರ್‌ಜೆ ರಾಜ್ಯ ಮಟ್ಟದ ಜೂನಿಯರ್ ಹಾಗೂ ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ ಅಸೋಸಿಯೇಷನ್‌ನ 7 ಈಜುಪಟುಗಳು ಈ ಸಾಧನೆ ಮಾಡುವ ಮೂಲಕ ಮೈಸೂರಿಗೆ ಕೀರ್ತಿ ತಂದಿದ್ದಾರೆ.
ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಸ್.ರುತ್ವ (6 ಚಿನ್ನ ಹಾಗೂ 1 ಬೆಳ್ಳಿ ಪದಕದೊಂದಿಗೆ ವೈಯಕ್ತಿಕ ಚಾಂಪಿಯನ್), ಸುಬ್ರಮಣ್ಯ ಜೀವಾಂಶ್(2 ಚಿನ್ನ, 4 ಬೆಳ್ಳಿ ಮತ್ತು 1 ಕಂಚು), ಎ. ಸಮೃದ್ಧ್(1ಚಿನ್ನ, 2 ಬೆಳ್ಳಿ ಮತ್ತು 1 ಕಂಚು) ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿಸಲಿದ್ದಾರೆ. ಉಳಿದಂತೆ ಎನ್.ಹಾರಿಕ 1 ಚಿನ್ನ, 1 ಬೆಳ್ಳಿ, ಆರ್. ಸಾನ್ವಿ 6 ಬೆಳ್ಳಿ, ಎ. ಅದ್ರಿತ್ 2 ಕಂಚು ಗಳಿಸಿದ್ದಾರೆ.
ಮೈಸೂರಿನ ಪುಟ್ಟರಾಜ ಗವಾಯಿ ಕ್ರೀಡಾ ಸಮುಚ್ಚಯದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಈಜುಕೊಳದಲ್ಲಿರುವ ಜಿಎಸ್‌ಎ ಸಂಸ್ಥೆಯ ಮುಖ್ಯ ತರಬೇತುದಾರ ಪವನ್‌ಕುಮಾರ್ ರಾಜ್ಯಕ್ಕೆ ಉದಯೋನ್ಮುಖ ಈಜುಪಟುಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಹತ್ತಾರು ಈಜು ಕಲಿಗಳು ಇವರ ಮಾರ್ಗದರ್ಶನದಲ್ಲಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದಾರೆ.