

ಮೈಸೂರು: ಕೆಪಿಟಿಸಿಎಲ್‌ನಲ್ಲಿ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 28 ಲಕ್ಷ ರೂ. ಹಣ ಪಡೆದು ವಂಚನೆ ಎಸಗಿರುವ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಗಾಂಧಿನಗರದ ನಿವಾಸಿ ಸಂತೋಷ್ ಕುಮಾರ್ ಅವರು ನೀಡಿರುವ ದೂರಿನ ಮೇರೆಗೆ ಹನುಮಂತು, ಮಧುಸೂದನ್, ಶಶಿಕುಮಾರ್, ರಂಗನಾಥ್ ಅವರು ವಿರುದ್ಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಸೋದರಿಯ ಪುತ್ರಿ ಕಾವ್ಯಾ ಅವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಈ ನಾಲ್ವರು ತಿಳಿಸಿದ್ದರು. ಅದಕ್ಕಾಗಿ 28 ಲಕ್ಷ ರೂ. ವೆಚ್ಚವಾಗಲಿದೆ ಎಂದಿದ್ದರು. ಇದಕ್ಕೆ ಒಪ್ಪಿ ಹಂತ ಹಂತವಾಗಿ ಹಣವನ್ನು ನೀಡಲಾಗಿತ್ತು. ಉದ್ಯೋಗ ದೊರೆತಿದೆ.
ನೀವು ಕೆಪಿಟಿಸಿಎಲ್ ಕಚೇರಿ ಬಳಿ ಬನ್ನಿ ಎಂದು ಕೆಲವು ದಿನಗಳ ನಂತರ ತಿಳಿಸಿದ್ದಾರೆ. ನಂತರ ಕಚೇರಿ ಒಳಗಿದ್ದ ಒಬ್ಬ ವ್ಯಕ್ತಿಯನ್ನು ಪರಿಚಯಿಸಿದ್ದಾರೆ. ಇವರು ಇಲ್ಲಿನ ಲೆಕ್ಕಾಧಿಕಾರಿ ಎಂದು ಹೇಳಿದ್ದಾರೆ.
ಅವರು ಕೂಡ ನಿಮಗೆ ಕೆಲಸ ಆಗಿದೆ ಎಂದು ಹೇಳಿ ನಕಲಿ ನೇಮಕ ಪತ್ರ ನೀಡಿದ್ದಾರೆ. ನಿಮಗೆ ಕರೆ ಮಾಡಿದ ನಂತರ ಕೆಲಸಕ್ಕೆ ಬನ್ನಿ ಎಂದು ಹೇಳಿ ಕಳುಹಿಸಿದ್ದಾರೆ. ನಂತರ ಎಷ್ಟು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಿಲ್ಲ.
ಬಳಿಕ ಈ ನಾಲ್ವರು ನಮ್ಮಿಂದ ಹಣ ಪಡೆದು ವಂಚಿಸಿರುವುದು ತಿಳಿದು ಬಂದಿದೆ. ಈ ನಾಲ್ವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಂತೋಷ್ ಕುಮಾರ್ ದೂರಿನಲ್ಲಿ ಕೋರಿಕೊಂಡಿದ್ದಾರೆ.