

ನವಲಗುಂದ: ಪಟ್ಟಣದ ಒಳಚರಂಡಿ ಯೋಜನೆ ಕಾಮಗಾರಿಗೆ ಈಗಾಗಲೇ ಮೊದಲ ಹಂತದಲ್ಲಿ 28 ಕೋಟಿ ರೂ. ಮಂಜೂರಾಗಿದ್ದು. ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ನೀಡಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಕೇವಲ 6 ವಿಧಾನಸಭಾ ಕ್ಷೇತ್ರಕ್ಕೆ ಪುರಸಭೆ ಕಡ್ಡಟದ ನಿರ್ಮಾಣ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಕ್ಷೇತ್ರದ ಅಣ್ಣಿಗೇರಿ ಹಾಗೂ ನವಲಗುಂದ ಪಟ್ಟಣಕ್ಕೆ ಒಟ್ಟು 15 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸ್ಥಳ ನಿಗದಿ ಮಾಡಿ ಕಾಮಗಾರಿ ಕೈಗೊಳ್ಳಲಾಗುವುದು. ಅಲ್ಲದೆ, ಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅಂದಾಜು 50 ಕೋಟಿ ರೂ.ಯೋಜನಾ ವರದಿ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಸರ್ಕಾರ 1.5 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರ ಅಂದಾಜು 1.2 ಲಕ್ಷ ರೂ.ಅನುದಾನ ನಿಗದಿ ಮಾಡಿದ್ದು, ನಿರಾಶ್ರಿತರು ಮನೆ ಕಟ್ಟಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ತಹಸೀಲ್ದಾರ್ ಸುಧೀರ ಸಾಹುಕಾರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಉಪಾಧ್ಯಕ್ಷೆ ಫರೀದಾಬೇಗಂ ಬಬರ್ಚಿ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ವಾಲಿಕಾರ, ಸದಸ್ಯರಾದ ಮಹಾಂತೇಶ ಕಲಾಲ, ಮಂಜುನಾಥ ಜಾಧವ, ಮಹಾಂತೇಶ ಭೋವಿ, ಅಶ್ಪಾಕ್ ಹುಸೇನ, ಜೀವನ ಪವಾರ, ಬಾಬಾಜಾನ್ ಮಕಾನದಾರ, ಆಶೀಫ್ ನಾಶಿಪುಡಿ, ರವಿ ವಿಶ್ವಜ್ಞ ಇತರರು ಇದ್ದರು.