೪೦ ದಿನಗಳಲ್ಲಿ ೨೮ ಕೋವಿಡ್ ಪ್ರಕರಣಗಳು ದೃಢ

k.m.sathish kumar - Copy
Published on

ಮಡಿಕೇರಿ: ಕರೊನಾ ವೈರಸ್ ದೂರವಾಗಿದೆ ಎನ್ನುವಷ್ಟರಲ್ಲಿ ಜಿಲ್ಲೆಯಲ್ಲಿ ಮತ್ತೇ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ದೂಡಿದೆ. ಕಳೆದ ಒಂದು ವರ್ಷಗಳಿಂದ ಜಿಲ್ಲೆಯಲ್ಲಿ ಕಾಣಿಸಿಕೊಳ್ಳದ ವೈರಸ್ ಕಳೆದ ೪೦ ದಿನಗಳಲ್ಲಿ ೨೮ ಜನರಿಗೆ ಸೋಂಕಿದೆ.


ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ರಾಜ್ಯಗಳಿಗೆ ಕೋವಿಡ್ ಸೋಂಕು ವ್ಯಾಪಿಸುವ ಎಚ್ಚರಿಕೆ ನೀಡಿದ್ದು, ಮಾಸ್ಕ್ ಧರಿಸುವುದು ಸೇರಿದಂತೆ ಇನ್ನಿತರ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಕರ್ನಾಟಕ ರಾಜ್ಯದಲ್ಲಿಯೂ ಕೂಡ ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಕಡಿಮೆ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೊಡಗು ಕಡಿಮೆ ಸೋಂಕಿತರ ಪಟ್ಟಿಯಲ್ಲಿ ೨೮ನೇ ಸ್ಥಾನದಲ್ಲಿದೆ.


೨೮ ಪ್ರಕರಣಗಳು: ಕಳೆದ ೪೦ ದಿನಗಳಲ್ಲಿ ಒಟ್ಟು ೨೮ ಪ್ರಕರಣಗಳು ಜಿಲ್ಲೆಯಲ್ಲಿ ದೃಢಪಟ್ಟಿವೆ. ಸೋಂಕಿತರೆಲ್ಲರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಗಂಭೀರ ಸಮಸ್ಯೆಗಳಿಗೆ ತುತ್ತಾಗಿಲ್ಲ. ಈ ಹಿನ್ನೆಲೆ ಸೋಂಕಿತರನ್ನು ಅವರವರ ಮನೆಗಳಲ್ಲಿ ಪ್ರತ್ಯೇಕತೆಯಲ್ಲಿಡಲಾಗಿದೆ. ಶೀತ, ಜ್ವರ, ಕೆಮ್ಮು ಇದ್ದವರನ್ನು ಪರೀಕ್ಷೆ ನಡೆಸಿದ ಸಂದರ್ಭ ಕೋವಿಡ್ ಪತ್ತೆಯಾಗಿದೆ.


ಸೋಂಕಿತರಿಗೆ ಅಗತ್ಯ ಔಷಧಿಗಳನ್ನು ನೀಡಲಾಗುತ್ತಿದೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಗಂಭೀರ ಪರಿಸ್ಥಿತಿ ಉಂಟಾಗದಂತೆ ಅಗತ್ಯ ಪೂರ್ವ ತಯಾರಿ ಕೈಗೊಂಡಿದ್ದೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.


ಸ್ವ್ಯಾಬ್ ಪರೀಕ್ಷೆ: ಕೋವಿಡ್ ಗುಣಲಕ್ಷಣ ಹೊಂದಿರುವವರಿಗೆ ಸ್ವ್ಯಾಬ್ ಪರೀಕ್ಷೆ ಮಾಡಲು ಕಳೆದ ಒಂದು ವಾರದಿಂದ ಕ್ರಮವಹಿಸಲಾಗಿದೆ. ಇಲಾಖೆಯ ಸೂಚನೆ ಅನ್ವಯ ದಿನನಿತ್ಯ ೫೫೦ ಗುರಿ ಹೊಂದಲಾಗಿದೆ. ಆದರೆ, ಜಿಲ್ಲೆಯಲ್ಲಿ ೫೮೦ ಪರೀಕ್ಷೆಗಳು ನಿತ್ಯ ನಡೆಯುತ್ತಿವೆ. ಎಲ್ಲಾ ಮೆಡಿಕಲ್ ಆಫೀಸರ್‌ಗಳಿಗೆ ಈ ನಿಟ್ಟಿನಲ್ಲಿ ಸೂಚನೆಯನ್ನು ನೀಡಿದ್ದು, ರೋಗಲಕ್ಷಣ ಹೊಂದಿರುವವರನ್ನು ಕಡ್ಡಾಯವಾಗಿ ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.


ಮುಂದಿನ ದಿನಗಳಲ್ಲಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿಯೂ ಕೋವಿಡ್ ಪರೀಕ್ಷೆಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ೧೦೦ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಕೂಡ ಇದೆ ಎಂದು ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net