

ತುಮಕೂರು: ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಕರೊನಾ ಸೋಂಕಿತರ ಸಂಖ್ಯೆ ಶತಕ ದಾಟಿದೆ. ಇದರಲ್ಲಿ ತುಮಕೂರು ತಾಲೂಕಿನ ಪಾಲು 50, ಇನ್ನುಳಿದ ತಾಲೂಕುಗಳು ಉಳಿಕೆ 50 ಹಂಚಿಕೊಂಡಿವೆ.
ಭಾನುವಾರ 106 ಪ್ರಕರಣಗಳು ವರದಿಯಾಗಿದ್ದು 28 ಜನರು ಕೋವಿಡ್ ಆಸ್ಪತ್ರೆಗಳಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1214 ಆಗಿದ್ದು, 560 ಸಕ್ರಿಯ ಪ್ರಕರಣಗಳಾಗಿವೆ. ತುಮಕೂರು 50, ಕುಣಿಗಲ್ 11, ಗುಬ್ಬಿ ಹಾಗೂ ಕೊರಟಗೆರೆ ತಲಾ 9, ಮಧುಗಿರಿ 8, ತುರುವೇಕೆರೆ 6, ಪಾವಗಡ ಹಾಗೂ ತಿಪಟೂರು ತಲಾ 5, ಚಿಕ್ಕನಾಯಕನಹಳ್ಳಿ 2, ಶಿರಾ 1 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಮಧುಗಿರಿ ತಾಲೂಕಿನ ಒಬ್ಬರು ಗರ್ಭಿಣಿ, ತುಮಕೂರಿನ ಒಬ್ಬ ಪೊಲೀಸ್ ಸಿಬ್ಬಂದಿ, 5 ವರ್ಷದೊಳಗಿನ ಒಂದು ಮಗು, 60 ವರ್ಷ ಮೇಲ್ಪಟ್ಟ 10 ವೃದ್ಧರು ಸೇರಿ ಒಟ್ಟು 55 ಪುರುಷರು ಹಾಗೂ 51 ಮಹಿಳೆಯರು ಸೋಂಕಿಗೆ ತುತ್ತಾಗಿದ್ದಾರೆ. ತುಮಕೂರು ಎಸ್‌ಎಸ್ ಪುರಂ 5ನೇ ಕ್ರಾಸ್, ಪಾವಗಡದ ಶ್ರೀನಿವಾಸನಗರ, ವೈ.ಎನ್.ಹೊಸಕೋಟೆ, ಹನುಮಂತಯ್ಯನಪಾಳ್ಯ, ಕನ್ನಮೇಡಿ, ನಲ್ಲಗಾನಹಳ್ಳಿ, ಬುಡ್ಡರೆಡ್ಡಿಹಳ್ಳಿ, ಮಧುಗಿರಿ ಜುಪಿಟರ್ ಶಾಲೆ ರಸ್ತೆ, ರಾಘವೇಂದ್ರ ಕಾಲನಿಯಲ್ಲಿ ಸೋಂಕು ಪತ್ತೆಯಾಗಿದೆ.
ತಿಪಟೂರಿನ ವಿನಾಯಕ ನಗರ (2), ಕಾರನೇಷನ್ ರಸ್ತೆ, ತುರುವೇಕೆರೆ ವಿದ್ಯಾನಗರ 3ನೇ ಕ್ರಾಸ್, ಸರಸ್ವತಿಪುರಂ, ದಂಡಿನಶಿವರ, ಚಿಕ್ಕನಾಯಕನಹಳ್ಳಿ ತಾಲೂಕು ಹುಲ್ಲೇನಹಳ್ಳಿ, ಕುಣಿಗಲ್ ಮದ್ದೂರು ರಸ್ತೆ, ಚಿಕ್ಕಮಧುರೆ, ಕೊರಟಗೆರೆ 12ನೇ ವಾರ್ಡ್, ಚಟ್ಟೇನಹಳ್ಳಿ (3) ಸೇರಿ ಜಿಲ್ಲೆಯಾದ್ಯಂತ 106 ಪ್ರಕರಣ ದಾಖಲಾಗಿವೆ.
ಪೊಲೀಸ್ ಕ್ವಾರ್ಟರ್ಸ್ ಸೀಲ್‌ಡೌನ್: ಗುಬ್ಬಿ ತಾಲೂಕಿನಲ್ಲಿ ಪತ್ತೆಯಾಗಿರುವ 9 ಪ್ರಕರಣಗಳ ಪೈಕಿ 6 ಪ್ರಕರಣ ಪಟ್ಟಣದ ಕುವೆಂಪು ನಗರದ ಪೊಲೀಸ್ ವಸತಿ ಗೃಹದಲ್ಲಿಯೇ ಪತ್ತೆಯಾಗಿವೆ. ಇಬ್ಬರು ಮಕ್ಕಳು, 68 ವರ್ಷದ ಒಬ್ಬ ವೃದ್ಧ, 32 ವರ್ಷದ ಮಹಿಳೆಯೂ ಸೇರಿದ್ದು ಆತಂಕ ಮೂಡಿಸಿದೆ. ವಸತಿಗೃಹವನ್ನು ಸೀಲ್‌ಡೌನ್ ಮಾಡಲಾಗಿದೆ.