

ಮಡಿಕೇರಿ:
ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ 2023-24ನೇ ಸಾಲಿನಲ್ಲಿ ಒಟ್ಟು 28.90 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮುದ್ದಂಡ ಬಿ. ದೇವಯ್ಯ ತಿಳಿಸಿದ್ದಾರೆ. ಸಂಘದ ಹುಣಸೂರು ಪೆಟ್ರೋಲ್ ಬಂಕ್‌ನಲ್ಲಿ 42.54 ಲಕ್ಷ ರೂ., ಹೆಬ್ಬಾಲೆ ಪೆಟ್ರೋಲ್ ಬಂಕ್‌ನಲ್ಲಿ 14.12 ಲಕ್ಷ ರೂ., ಕಾಫಿ ಪುಡಿ ಮಾರಾಟದಿಂದ 1.58 ಲಕ್ಷ ರೂ., ಕಾಫಿ ಸಂಸ್ಕರಣಾ ವ್ಯವಹಾರದಿಂದ 3.68 ಲಕ್ಷ ರೂ., ಜೇನು ಮಾರಾಟದಿಂದ 49 ಸಾವಿರ, ವಿವಿಧ ಕಟ್ಟಡಗಳ ಬಾಡಿಗೆಯಿಂದ ಒಟ್ಟು 1 ಕೊಟಿ 3 ಲಕ್ಷ ರೂ. ಆದಾಯ ಬಂದಿದೆ. ಈ ವರ್ಷದ ಎಲ್ಲಾ ಲಾಭಾಂಶಗಳನ್ನು ಕಳೆದ ನಂತರ 13.14 ಕೋಟಿ ಕ್ರೋಢೀಕೃತ ನಷ್ಟದಲ್ಲಿ ಸಂಘ ಮುಂದುವರಿದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದಲ್ಲಿ ಒಟ್ಟು 9,217 ಸದಸ್ಯರು ಇದ್ದಾರೆ. ಈ ಪೈಕಿ 2,903 ಸದಸ್ಯರು ಅಪೂರ್ಣ ಪಾಲು ಹಣ ಹೊಂದಿದ್ದಾರೆ. ಸದಸ್ಯರಿಂದ ಒಟ್ಟು 1.26 ಕೋಟಿ ಮತ್ತು ರಾಜ್ಯ ಸರ್ಕಾರದಿಂದ 3.04 ಕೋಟಿ ರೂ. ಸೇರಿದಂತೆ ಒಟ್ಟು 4.32 ಕೋಟಿ ಪಾಲು ಬಂಡವಾಳವಿದೆ. ಹುಣಸೂರು ಪೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಚಾರ್ಜಿಂಗ್ ಕೇಂದ್ರ, ಸಿಎನ್‌ಜಿ ಗ್ಯಾಸ್ ಬಂಕ್ ಸ್ಥಾಪನೆಗೆ ವ್ಯವಹಾರ ನಡೆಸಲಾಗುತ್ತಿದೆ. ಅಮ್ಮತ್ತಿಯಲ್ಲಿರುವ ಸಂಘದ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಕಾಫಿ ಕೃಪಾ ಕಟ್ಟಡಕ್ಕೆ ಒತ್ತಿಕೊಂಡು ಮಳಿಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ವಾರ್ಷಿಕ ಮಹಾಸಭೆ ಶುಕ್ರವಾರ (ಸೆ.20) ಬೆಳಗ್ಗೆ 11 ಗಂಟೆಗೆ ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯಲಿದ್ದು, ಸದಸ್ಯರು ಹಾಜರಾಗಿ ಸಲಹೆ, ಅಭಿಪ್ರಾಯಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ.
ಸಂಘದ ನಿರ್ದೇಶಕರಾದ ನಾಪಂಡ ರವಿ ಕಾಳಪ್ಪ, ನಾಯಕಂಡ ಕೆ. ಅಯ್ಯಣ್ಣ, ಚಟ್ರಂಡ ಲೀಲಾ ಮೇದಪ್ಪ, ಎಂ.ಎA. ಧರ್ಮಾವತಿ ಹಾಗೂ ವ್ಯವಸ್ಥಾಪಕ ಎಂ.ಎ. ನಾಣಯ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.