28.40 ಕೋಟಿ ರೂ. ವೆಚ್ಚದಲ್ಲಿ ಕೋಟೆಯಲ್ಲಿ ಧ್ವನಿ ಬೆಳಕು, ಮೂಲಸೌಕರ್ಯ

CTD---5....
Published on

ಚಿತ್ರದುರ್ಗ: ಚಿತ್ರದುರ್ಗದ ಐತಿಹಾಸಿಕ ಏಳು ಸುತ್ತಿನ ಕೋಟೆಯಲ್ಲಿ 28.40 ಕೋಟಿ ರೂ.ವೆಚ್ಚದಲ್ಲಿ ಧ್ವನಿ ಬೆಳಕು ವ್ಯವಸ್ಥೆ, ಕೋಟೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಸಹಿತ ನಾನಾ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕೋಟೆಯನ್ನು ಇನ್ನಷ್ಟು ಆಕರ್ಷಕಗೊಳಿಸಿ, ಅದರ ಇತಿಹಾಸ ತಿಳಿಸಲು ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅನುಮತಿಗೆ ಕ್ರಮ ವಹಿಸಲಾಗಿದೆ ಎಂದರು.

ಹೊಸದುರ್ಗ ತಾಲೂಕಿನ ಗವಿರಂಗಾಪುರ, ಹಾಲುರಾಮೇಶ್ವರ ಕ್ಷೇತ್ರಗಳ ಅಭಿವೃದ್ಧಿಗೆ ಅಂದಾಜು 2 ಕೋಟಿ ರೂ.ಅನುದಾನ ಒದಗಿಸಲಾಗಿದೆ. ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯ ಪ್ರಮುಖ ವೀರಗಲ್ಲು, ಮಾಸ್ತಿಗಲ್ಲು ಹಾಗೂ ಸ್ಮಾರಕಗಳ ರಕ್ಷಣೆಗೆ ಯೋಜನೆ ರೂಪಿಸಬೇಕು. ಚಿತ್ರದುರ್ಗ ಕೋಟೆಯಲ್ಲಿ ಕೆಫೆಟೇರಿಯಾ, ವಸ್ತು ಸಂಗ್ರಹಾಲಯ ನಿರ್ಮಾಣ ಹಾಗೂ ಕೋಟೆಯ ಪ್ರಮುಖ ತಾಣಗಳಿಗೆ ಪ್ರವಾಸಿಗರು ತಲುಪಲು ರೈಲಿಂಗ್ಸ್ ಅಳವಡಿಸುವುದು ಸೇರಿ 5 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲು ಡಿಸಿ ಸೂಚಿಸಿದರು.

ಒತ್ತುವರಿ ತೆರವಿಗೆ ಕ್ರಮ: ಕೋಟೆಗೆ ಪ್ರತಿ ತಿಂಗಳು 35 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಸೂಕ್ತ ರಸ್ತೆ ಇಲ್ಲ. ಇರುವ ರಸ್ತೆಗಳೂ ಒತ್ತುವರಿಯಾಗಿವೆ. ಕೋಟೆ ಮುಂಭಾಗದಲ್ಲೂ ವಾಹನಗಳ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ನಗರದ ಗಾಂಧಿ ವೃತ್ತದಿಂದ ಕೋಟೆಗೆ ತೆರಳುವ ರಸ್ತೆ ಹಾಗೂ ಕೋಟೆ ಸುತ್ತಮುತ್ತಲಿನ ಒತ್ತುವರಿ ತೆರವುಗೊಳಿಸಲು ಮತ್ತು ಪಾರ್ಕಿಂಗ್ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ಎನ್‌ಎಚ್-4ರಿಂದ ಕೋಟೆ ತಲುಪುವ ಅಂದಾಜು 3.5 ಕಿ.ಮೀ. ವರ್ತುಲ ರಸ್ತೆಗೆ ಕುಡಾದಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಲೋಕೋಪಯೋಗಿ ಇಲಾಖೆ ಈ ಕುರಿತು ಆಸಕ್ತಿ ತೋರಿಲ್ಲ. ಈ ಸಂಬಂಧ ಸಚಿವರ ಜತೆ ಚರ್ಚಿ ಸಲಾಗುವುದು ಎಂದರು.

ಕೋಟೆ ಸ್ವಚ್ಛತೆಗೆ ವಿಶೇಷ ಅಭಿಯಾನ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೋಟೆ ಆವರಣ ಸ್ವಚ್ಛತೆಗೆ ಕ್ರಮ ವಹಿಸುತ್ತಿಲ್ಲ ಎಂದು ಡಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಐ ಅಧಿಕಾರಿಗಳು, ಸಿಬ್ಬಂದಿ, ಅನುದಾನ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಸಿಬ್ಬಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಡಿಎಂಎಫ್ ನಿಧಿಯಿಂದ ಅನುದಾನ ಒದಗಿಸಲಾಗುವುದು.ನಗರಸಭೆ ಹಾಗೂ ವಿವಿಧ ಇಲಾಖೆಗಳು, ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿಶೇಷ ಅಭಿಯಾನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ದತ್ತು ಸ್ವೀಕಾರ ಯೋಜನೆಗೆ ತಾಕೀತು

ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಮಾರಕ ದತ್ತು ಸ್ವೀಕಾರ ಯೋಜನೆ ಜಾರಿಗೊಳಿಸಲಾಗಿದೆ. ಎಎಸ್‌ಐ ವ್ಯಾಪ್ತಿಯ ಸ್ಮಾರಕಗಳನ್ನು ಹೊರತುಪಡಿಸಿ ರಾಜ್ಯದ ವಿವಿಧ ಧಾರ್ಮಿಕ ಕ್ಷೇತ್ರಗಳು, ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಯ ಸ್ಮಾರಕಗಳನ್ನು ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳು, ಕಂಪನಿಗಳು ತಮ್ಮ ಸಿಎಸ್‌ಆರ್ ಚಟುವಟಿಕೆಗಳಡಿ ದತ್ತು ಪಡೆದು ಮೂಲ ಸೌಕರ್ಯಗಳನ್ನು ಒದಗಿಸಬಹುದು. ಜಿಲ್ಲೆಯಲ್ಲಿ ಈ ವರ್ಷ ಕನಿಷ್ಠ 5 ಪ್ರವಾಸಿ ತಾಣಗಳ ದತ್ತು ಕೊಟ್ಟು ಅಭಿವೃದ್ಧಿಪಡಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಡಿಸಿ ತಾಕೀತು ಮಾಡಿದರು.

4 ಕೆರೆಗಳಲ್ಲಿ ಜಲಕ್ರೀಡೆಗೆ ಅನುಮತಿ

ಚಿತ್ರದುರ್ಗದ ಚಂದ್ರವಳ್ಳಿ ಕೆರೆ, ಮಲ್ಲಾಪುರ ಕೆರೆ, ಚಳ್ಳಕೆರೆ-ಕೆರೆಕಲ್‌ಕೆರೆ, ಮೊಳಕಾಲ್ಮೂರು-ರಂಗಯ್ಯನದುರ್ಗದಲ್ಲಿ ಸಾಹಸ ಪ್ರವಾಸೋದ್ಯಮ ಹಾಗೂ ಜಲಕ್ರೀಡೆಗಳನ್ನು ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಳೆದ ವರ್ಷವೇ ಅನುಮತಿ ನೀಡಿದೆ. ಚಂದ್ರವಳ್ಳಿಯಲ್ಲಿ ಜಲಸಾಹಸ ಕ್ರೀಡೆಗಳಾದ ಕಯಾಕಿಂಗ್, ಕನೋಯಿಂಗ್, ವಿಂಡ್ ಸರ್ಫಿಂಗ್, ಜಿಟ್ ಸ್ಕೀಯಿಂಗ್ ವಾಟರ್ ಜಾರ್ಬಿಂಗ್ ಹಾಗೂ ಬೋಟಿಂಗ್ ಕೈಗೊಳ್ಳಲು ಸಣ್ಣ ನೀರಾವರಿ ಇಲಾಖೆ ಹಾಗೂ ನಗರಸಭೆ ಎನ್‌ಒಸಿ ಕೊಟ್ಟಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಶೀಘ್ರ ಅನುಷ್ಠಾನಕ್ಕೆ ಡಿಸಿ ಸೂಚಿಸಿದರು.

ಜಿಪಂ ಸಿಪಿಒ ಗಾಯತ್ರಿ, ಭದ್ರಾ ಮೆಲ್ದಂಡೆ ಯೋಜನೆ ಇಇ ಚಂದ್ರಪ್ಪ ಬಾರಿಕರ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜ್ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net