

ಗೋಣಿಕೊಪ್ಪ: ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡಂಡ ಕುಟ್ಟಪ್ಪ ಸ್ಮರಣಾರ್ಥ ಅ.27ರಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆರಂಭವಾಗಲಿರುವ ಹಾಕಿ ಟೂರ್ನಿಯಲ್ಲಿ 106 ಕೊಡವ ತಂಡಗಳು ಪಾಲ್ಗೊಳ್ಳುತ್ತಿವೆ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಹೇಳಿದರು.
ಪ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಹಾಕಿ ಟೂರ್ನಿ ಲೋಗೋ ಅನಾವರಣ ಸಮಾರಂಭದಲ್ಲಿ ಮಾತನಾಡಿ, ಅ.27ರಿಂದ ನವೆಂಬರ್ 6 ರವರೆಗೆ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. 5ಎ ಸೈಡ್ ರೀತಿಯಲ್ಲಿ ಟೂರ್ನಿ ನಡೆಯಲಿದ್ದು, ಕೊಡವ ಹಾಕಿಯನ್ನು ಮುಂದುವರಿಸುವ ಚಿಂತನೆಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಹಾಕಿ ಮಾಜಿ ಆಟಗಾರ ಲೆ. ಕ. ಬಾಳೆಯಡ ಸುಬ್ರಮಣಿ ಲೋಗೋ ಅನಾವರಣಗಳಿಸಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ 12 ತಂಡಗಳು ಒಂದು ಟೂರ್ನಿಯನ್ನು ಆಡುವುದು ವಿಶೇಷತೆ. ಆದರೆ, ಕೊಡವ ಹಾಕಿ ನಮ್ಮೆಯಲ್ಲಿ 300 ಕ್ಕೂ ಹೆಚ್ಚು ತಂಡಗಳು ಒಂದು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶ್ವಮಟ್ಟದ ದಾಖಲೆ. ಇದಕ್ಕೆ ಕಾರಣಕರ್ತರಾದ ಪಾಂಡಂಡ ಕುಟ್ಟಪ್ಪ ಅವರನ್ನು ಹಾಕಿ ಮೂಲಕ ಸ್ಮರಿಸಿಕೊಳ್ಳುತ್ತಿರುವುದು ಕ್ರೀಡೆಯ ವಿಶೇಷತೆ ಇದೆ. 23 ವರ್ಷ ಕೊಡವ ಕೌಟುಂಬಿಕ ಹಾಕಿ ನಡೆದಿದೆ. ಇದು ಮುಂದುವರಿಯಬೇಕೆಂಬ ಉತ್ಸಾಹ ಕ್ರೀಡಾಭಿಮಾನಿಗಳಲ್ಲಿದೆ ಎಂದರು.
ನೆನಪು: 1997ರಲ್ಲಿ ಕಡಂಗ ಗ್ರಾಮದಲ್ಲಿ ಆರಂಭವಾದ ಪಾಂಡಂಡ ಹಾಕಿ ಟೂರ್ನಿಯಲ್ಲಿ 80 ತಂಡಗಳು ಪಾಲ್ಗೊಂಡಿದ್ದವು. ಈಗ 300 ಕ್ಕೂ ಹೆಚ್ಚು ಕುಟುಂಬ ತಂಡಗಳು ಪಾಲ್ಗೊಳ್ಳುವ ಹಂತಕ್ಕೆ ತಲುಪಿರುವುದು ವಿಶ್ವ ಮಟ್ಟದಲ್ಲಿಯೇ ವಿಶೇಷ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಕೌಟುಂಬಿಕ ಹಾಕಿ ಮೂಲಕ ಜಿಲ್ಲೆಯಲ್ಲಿ ಎಲ್ಲ ಜನಾಂಗಗಳು ಒಗ್ಗಟ್ಟು ಪ್ರತೀಕವಾಗಿ ಟೂರ್ನಿ ನಡೆಸುತ್ತಿವೆ. ವಿಶ್ವದಾಖಲೆಗೆ ಕೂಡ ಟೂರ್ನಿ ಕಾರಣವಾಗುತ್ತಿದೆ ಎಂದು ಹೇಳಿದರು.
ಲಾಂಛನದಲ್ಲಿ 1997 ಇಸವಿಯ ದಿನಾಂಕ ದಾಖಲಿಸಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಉದಯವಾದ ವರ್ಷವನ್ನು ಸ್ಮರಿಸಿಕೊಳ್ಳಲಾಯಿತು. ಒಂದು ತಂಡದಲ್ಲಿ 5 ಆಟಗಾರರು ಆಡಲಿದ್ದಾರೆ. 10 ದಿನ ಟೂರ್ನಿ ನಡೆಯಲಿದೆ ಎಂದರು.
ಕೊಡವ ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಮೇಕೇರಿ ರವಿ ಪೆಮ್ಮಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಬಡಕಡ ದೀನಾ ಪೂಣಚ್ಚ, ವಿರಾಜಪೇಟೆ ಅಧ್ಯಕ್ಷ ಮಾದಂಡ ಪೂವಯ್ಯ, ಕಾರ್ಯದರ್ಶಿ ಮಾಳೇಟೀರ ಶ್ರೀನಿವಾಸ್, ಹಾಕಿಕೂರ್ಗ್ ಸಂಚಾಲಕ ಬುಟ್ಟಿಯಂಡ ಚಂಗಪ್ಪ, ನಿರ್ದೇಶಕ ಚೆಯ್ಯಂಡ ಸತ್ಯ ಗಣಪತಿ, ಕಂಬೀರಂಡ ರಾಕಿ ಪೂವಣ್ಣ ಇದ್ದರು.