

ಮದ್ದೂರು: ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಯುವ ಮುಖಂಡ ಕದಲೂರು ಕೆ.ಎಂ.ರವಿ ತಿಳಿಸಿದರು.
ಪಟ್ಟಣದ ಶಿವಪುರದ ಶಾಸಕರ ಕಚೇರಿಯ ಬಳಿ ನಾಡಪ್ರಭು ಕೆಂಪೇಗೌಡ 514ನೇ ಜಯಂತಿ ಅಂಗವಾಗಿ ಕೆಂಪೇಗೌಡರ ಸಾಧನೆ ಕುರಿತು ತಾಲೂಕಿನಾದ್ಯಂತ ಸಂಚಾರ ಮಾಡುವ ರಥಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಕೆಂಪೇಗೌಡರ ರಥ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಸಂಚಾರ ಮಾಡಿ ಕೆಂಪೇಗೌಡರ ಸಾಧನೆ ಮತ್ತು ಇತಿಹಾಸವನ್ನು ತಿಳಿಸಲಿದೆ. ಜೂ.27 ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಕೆ.ಎಂ.ಉದಯ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಂಪೇಗೌಡ ಜಯಂತಿಯಂದು ರಥಯಾತ್ರೆ ಕೊನೆಗೊಳ್ಳಲಿದೆ ಎಂದರು.
ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವ ಮೂಲಕ ಕೋಟ್ಯಂತರ ಜನರು ಜೀವನ ಕಟ್ಟಿಕೊಳ್ಳಲು ಯೋಜನೆ ರೂಪಿಸಿದ ಫಲವಾಗಿ ಬೆಂಗಳೂರು ನಗರ ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ ವಿವಿಧ ಪೇಟೆಗಳನ್ನು ಸೃಷ್ಟಿ ಮಾಡಿ ಎಲ್ಲ ಜನಾಂಗದವರು ವ್ಯಾಪಾರ-ವಹಿವಾಟು ನಡೆಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದರು. ಜತೆಗೆ, ಕೃಷಿ, ನೀರಾವರಿ, ಕೆರೆ, ಕಟ್ಟೆಗಳು, ಉದ್ಯಾನವನಗಳನ್ನು ನಿರ್ಮಿಸಿ ಅಂದಿನ ಕಾಲದಲ್ಲೇ ಅನುಕೂಲ ಕಲ್ಪಿಸಿರುವುದು ಇವರ ದೂರದೃಷ್ಟಿತ್ವದ ಆಡಳಿತದ ಫಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ಮತ್ತು ರಾಜ್ಯಕ್ಕೆ ತನ್ನದೆಯಾದ ಮಹತ್ತರವಾದ ಕೊಡುಗೆ ನೀಡಿದ ಕೆಂಪೇಗೌಡ ಜಯಂತಿಯನ್ನು ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಪ್ರತಿಯೊಬ್ಬರು ಸಹಕಾರ ನೀಡಿಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಗಣ್ಯರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕೆಂಪೇಗೌಡರ ಪರವಾಗಿ ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು.
ಕಸ್ತೂರು ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮುಖಂಡರಾದ ನ.ಲಿ.ಕೃಷ್ಣ, ಶಂಕರೇಗೌಡ, ಸೊ.ಶಿ.ಪ್ರಕಾಶ್, ಕ್ರಾಂತಿಸಿಂಹ, ದಯಾನಂದ್, ರಾಬರ್ಟ್‌ರಾಜು, ಯರಗನಹಳ್ಳಿ ಹರೀಶ್, ಜಗ್ಗಿಶೀನಪ್ಪ, ಬಸವರಾಜು, ರವಿಕುಮಾರ್ ಇತರರು ಇದ್ದರು.