

ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆ ವಿರೋಧಿಸಿ ನೀಡಲಾಗಿರುವ ‘ಭಾರತ ಬಂದ್’ ಕರೆ ಬೆಂಬಲಿಸಿ ಸೆ.27ರಂದು ಚನ್ನಮ್ಮ ಕಿತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಕಿತ್ತೂರು ಕೋಟೆ ಆವರಣದಲ್ಲಿ ಸಮಾವೇಶಗೊಳ್ಳುತ್ತೇವೆ. ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ರಾಷ್ಟ್ರೀಯ ಹೆದ್ದಾರಿ-4 ತಡೆಯಲು ತೀರ್ಮಾನಿಸಿದ್ದೇವೆ. ಪಕ್ಷಾತೀತವಾಗಿ ಎಲ್ಲ ರೈತರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದರು.
ಕೃಷಿಗೆ ಮಾರಕವಾಗಿರುವ ಕಾಯ್ದೆಗಳ ಮೂಲಕ ಕೇಂದ್ರ ಸರ್ಕಾರ ರೈತರ ಮರಣಶಾಸನ ಬರೆದಿದೆ. ಇದನ್ನು ವಿರೋಧಿಸಿ 9 ತಿಂಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದರೂ ಗಮನ ಹರಿಸುತ್ತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ರೈತಪರ ನಿಲುವು ತಳೆಯಬೇಕು. ವಿದ್ಯುತ್ ಖಾಸಗೀಕರಣ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷ ಪ್ರತಿ ಟನ್ ಕಬ್ಬಿಗೆ 2,850 ರೂ. ದರ ನಿಗದಿಪಡಿಸಲಾಗಿತ್ತು. ಈ ಬಾರಿ ಕಾಟಾಚಾರಕ್ಕೆ ಎಂಬಂತೆ, 50 ರೂ. ಹೆಚ್ಚಿಸಲಾಗಿದೆ. ಆದರೆ, ಡೀಸೆಲ್ ದರ ಹೆಚ್ಚಿದ್ದರಿಂದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ವೆಚ್ಚವೇ ಅಧಿಕವಾಗಲಿದ್ದು, ಕೂಡಲೇ ಕಬ್ಬಿಗೆ ಹೆಚ್ಚಿನ ದರ ೋಷಿಸಬೇಕು. ಕರೊನಾ ಹಾಗೂ ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಕಲ್ಯಾಣರಾವ್ ಮುಚಳಂಬಿ ಮಾತನಾಡಿ, ರೈತರ ಹೋರಾಟಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು. ಉಭಯ ಸರ್ಕಾರಗಳು ಇನ್ನಾದರೂ ರೈತರ ಸಂಕಷ್ಟಕ್ಕೆ ಮಿಡಿಯಬೇಕು ಎಂದು ಕೋರಿದರು.
ಅಪ್ಪೇಶ ದಳವಾಯಿ, ನಿಂಗಪ್ಪ ನಂದಿ, ಬೈಲಪ್ಪ ದಳವಾಯಿ, ಕಲಗೌಡ ಪಾಟೀಲ, ಅಪ್ಪೇಶ ದಳವಾಯಿ ಇತರರು ಇದ್ದರು.