

ಮೈಸೂರು: ಸರ್ಕಾರ ಗ್ರಾಮಾಂತರ ಭಾಗದಲ್ಲಿ ಹೆಚ್ಚು ಗೃಹ ಕೈಗಾರಿಕೆ, ಗೃಹ ಉದ್ಯಮವನ್ನು ನಿರ್ಮಾಣ ಮಾಡಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಮಾಜಿ ಯೋಧ ಕರ್ನಲ್ ವಿ.ಪಿ.ಸದಾಶಿವ ಹೇಳಿದರು.
ನಗರದ ಅಮಿಗೋ ಪಾರ್ಟಿ ಹಾಲ್ನಲ್ಲಿ ಸೋಮವಾರ ಆಯೋಜಿಸಿದ್ದ ಧಾನ್ ಫೌಂಡೇಷನ್‌ನ 27ನೇ ಸಂಸ್ಥಾಪನಾ ದಿನ ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಿರು ಕೈಗಾರಿಗಳನ್ನು ಸರ್ಕಾರ ಸ್ಥಾಪಿಸಿದರೆ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ. ಎಲ್ಲ ಕುಟುಂಬಗಳು ಅಭಿವೃದ್ಧಿಯಾಗುತ್ತವೆ. ಬಡತನವೂ ನಿರ್ಮೂಲನೆಯಾಗುತ್ತದೆ. ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುತ್ತದೆ. ಹಾಗಾಗಿ, ಸರ್ಕಾರ ಹೋಬಳಿ ಮಟ್ಟದಲ್ಲಿ ಕಿರುಗೃಹ ಕೈಗಾರಿಕೆ ಮತ್ತು ಕೃಷಿ ಆಧಾರಿತ ಉದ್ಯಮ ಆರಂಭಿಸಬೇಕು ಎಂದು ಹೇಳಿದರು.
ಆಯಾ ಸ್ಥಳೀಯ ಬೆಳೆಗಳನ್ನು ಆಧರಿಸಿ ಗೃಹ ಉದ್ಯಮ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ಉದಾಹರಣೆ ಆಲೂಗಡ್ಡೆ ಬೆಳೆಯುತ್ತಿದ್ದರೆ ಆಲೂಗಡ್ಡೆ ಚಿಪ್ಸ್ ಮಾಡುವುದು, ಲೇಸ್ ಮಾಡುವುದು, ಊದುಬತ್ತಿ ಮಾಡುವುದು, ಟೊಮ್ಯಾಟೊದಿಂದ ಜಾಮ್ ಮಾಡುವುದು, ಫೈನಾಪಲ್ ನಿಂದ ಜೂಸ್, ಜಾಮ್ ಮಾಡುವುದು ಹೀಗೆ… ಸ್ಥಳೀಯ ಬೆಳೆಗಳನ್ನು ಆಧಾರಿತ ಗೃಹ ಉದ್ಯಮ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಧಾನ್ ಫೌಂಡೇಷನ್‌ನ ಪ್ರಾದೇಶಿಕ ಸಂಯೋಜಕ ಶಂಕರಪ್ರಸಾದ್ ಮಾತನಾಡಿ, ಧಾನ್ ಫೌಂಡೇಷನ್ ದೇಶದಲ್ಲಿ 30 ವರ್ಷದಿಂದ ಹಾಗೂ ಕರ್ನಾಟಕ ಮತ್ತು ಮೈಸೂರಿನಲ್ಲಿ 20 ವರ್ಷದಿಂದ ಬಡತನ ನಿರ್ಮೂಲನೆ ಹಾದಿಯಲ್ಲಿ ಕೆಲಸ ಮಾಡುತ್ತಿದೆ. ಗಾಂಧೀಜಿ ಅವರ ಮೌಲ್ಯವನ್ನು ಸಂಸ್ಥೆ ಅಳವಡಿಸಿಕೊಂಡಿದೆ. ಮುಖ್ಯವಾಗಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಲ್ಲಿ ಉಳಿತಾಯ ಮನೋಭಾವ ಬೆಳೆಸುವುದು, ಮಹಿಳೆಯರ ಆರ್ಥಿಕ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ. ಮಹಿಳೆಯರ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕ್ ಮೂಲಕ ಸಾಲವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಕರೆ ಆಧಾರಿತ ಕೃಷಿ ಕಾರ್ಯಕ್ರಮಗಳ ಮೂಲಕ ರೈತರಿಗೆ ಇರುವ ಎಲ್ಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಮಳೆ ಆಧಾರಿತ ಪ್ರದೇಶದ ರೈತರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ವಿಕಾಸ್ ವರ್ಮ, ಪದ್ಮಾವತಿ, ಪ್ರಮೀಳಾ, ಸುಕನ್ಯಾ, ಸಿಬ್ಬಂದಿ ನಾರಾಯಣ ಹೆಗಡೆ, ಮಂಜುನಾಥ್, ಹುಸೇನ್, ಪ್ರಭುಶಂಕರ್, ಭಾಗ್ಯ ಇದ್ದರು.