

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಸೋಮವಾರ 279 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ದ.ಕ.ದಲ್ಲಿ 153, ಉಡುಪಿ ಜಿಲ್ಲೆಯಲ್ಲಿ 126 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ದ.ಕ.ದಲ್ಲಿ ಮೃತಪಟ್ಟ 7 ಮಂದಿಯಲ್ಲಿಯೂ ಸೋಂಕಿತ್ತು.
ಮಂಗಳೂರು ತಾಲೂಕಿನಲ್ಲಿ ಅತ್ಯಧಿಕ 119 ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದೆ. ಉಳಿದಂತೆ ಬಂಟ್ವಾಳ 11, ಬೆಳ್ತಂಗಡಿ 6, ಪುತ್ತೂರು 4 ಮತ್ತು ಸುಳ್ಯದ ಒಬ್ಬರು ಪಾಸಿಟಿವ್ ಆಗಿದ್ದಾರೆ. 12 ಮಂದಿ ಹೊರ ಜಿಲ್ಲೆಯವರು. ಮೃತಪಟ್ಟ 7 ಮಂದಿಯೂ ಮಂಗಳೂರು ತಾಲೂಕು ವ್ಯಾಪ್ತಿಯವರು. 124 ಮಂದಿ ವಿವಿಧ ಆಸ್ಪತ್ರೆಗಳಿಂದ ಗುಣವಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 3138 ಸಕ್ರಿಯ ಪ್ರಕರಣಗಳಿದ್ದು, 2854 ಮಂದಿ ಸೋಂಕುಮುಕ್ತರಾಗಿದ್ದಾರೆ.
ಉಡುಪಿಯಲ್ಲಿ 1086 ನೆಗೆಟಿವ್: ಉಡುಪಿಯ 58, ಕುಂದಾಪುರದ 34, ಕಾರ್ಕಳದ 28 ಸೇರಿದಂತೆ 6 ಹೊರ ಜಿಲ್ಲೆಯ ಮಂದಿ ಸೋಂಕು ಬಾಧಿತರು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4800ಕ್ಕೆ ಏರಿಕೆಯಾಗಿದೆ. 116 ಮಂದಿ ಸೋಂಕಿನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. 1086 ಮಂದಿಯ ವರದಿ ನೆಗೆಟಿವ್ ಬಂದಿದೆ. ಇದುವರೆಗೆ 2812 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ. ಇನ್ನೂ 526 ಮಂದಿಯ ವರದಿ ಬರಲು ಬಾಕಿ ಇದೆ. 1952 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕಾಸರಗೋಡಲ್ಲಿ ಪೊಲೀಸರಿಗೆ ಕೋವಿಡ್ ಕಾಟ
ಕಾಸರಗೋಡು: ಜಿಲ್ಲೆಯ ಚಂದೇರ, ಹೊಸದುರ್ಗ, ಮಂಜೇಶ್ವರ ಠಾಣೆಯ ಪೊಲೀಸರಲ್ಲಿ ಸೋಂಕು ಪತ್ತೆಯಾಗಿದ್ದು, ಕೋವಿಡ್ ಬಾಧಿತ ಪೊಲೀಸರ ಸಂಖ್ಯೆ ಜಿಲ್ಲೆಯಲ್ಲಿ 12ಕ್ಕೇರಿದೆ. ಈ ಹಿಂದೆ ಕುಂಬಳೆ ಠಾಣೆ, ಎ.ಆರ್. ಕ್ಯಾಂಪ್ ಪೊಲೀಸರಲ್ಲೂ ಸೋಂಕು ಕಾಣಿಸಿಕೊಂಡಿತ್ತು. ಜಿಲ್ಲೆಯ 66 ಮಂದಿ ಒಳಗೊಂಡಂತೆ ಕೇರಳದಲ್ಲಿ 962 ಮಂದಿಗೆ ಸೋಮವಾರ ಕೋವಿಡ್ 19 ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. ಉಪ್ಪಳ ಶಾರದಾ ನಗರ ನಿವಾಸಿ 46 ವರ್ಷದ ಪುರುಷ ಕರೊನಾದಿಂದ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ನಿಧನರಾದರು. ಉದರ ಸಂಬಂಧಿ ಕಾಯಿಲೆಯಿಂದ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರಿಗೆ ಕೋವಿಡ್ ದೃಢಪಟ್ಟಿತ್ತ್ತು. ಅಸೌಖ್ಯ ತೀವ್ರಗೊಂಡಿದ್ದರಿಂದ ಅವರನ್ನು ಪರಿಯಾರಂಗೆ ಕರೆದೊಯ್ಯಲಾಗಿತ್ತು.
ಸಚಿವ ಕೋಟ ಸ್ವಯಂ ಕ್ವಾರಂಟೈನ್
ಮಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಲು ಸೋಮವಾರ ನಿರ್ಧರಿಸಿದ್ದಾರೆ. ಜುಲೈ 30ರಂದು ಬೆಂಗಳೂರಿನಲ್ಲಿ ಜರುಗಿದ ಸಭೆಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿದ್ದೆ. ಇಲ್ಲಿಯವರೆಗೆ ಕರೊನಾ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಸರ್ಕಾರದ ನಿಯಮಾವಳಿಯಂತೆ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ. ಮಂಗಳವಾರ ಕರೊನಾ ಪರೀಕ್ಷೆ ನಡೆಸಲು ಉದ್ದೇಶಿಸಿದ್ದೇನೆ. ಅದರಲ್ಲಿ ನೆಗೆಟಿವ್ ಬಂದರೆ ಮತ್ತೆ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೋವಿಡ್ ತಪಾಸಣೆಗೆ ಡಿಸಿ ಸೂಚನೆ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು, ಅಂಗಡಿ ಮುಂಗಟ್ಟು, ಆಹಾರ ವಿತರಕ ಸಂಸ್ಥೆಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಸಿಬ್ಬಂದಿಗೆ ಕೋವಿಡ್ ತಪಾಸಣೆ ಮಾಡಿಸುವಂತೆ ಆದೇಶ ನೀಡಲಾಗಿದೆ. ಸಂಸ್ಥೆಗಳ ಮಾಲೀಕರು ಕಡ್ಡಾಯವಾಗಿ ತಮ್ಮ ವ್ಯಾಪ್ತಿಗೆ ಸೇರಿದ ತಾಲೂಕು ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸಿ ದಿನಾಂಕ ನಿಗದಿಪಡಿಸಿ ಸಿಬ್ಬಂದಿಗೆ ತಪಾಸಣೆ ಮಾಡಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.