ತುಮಕೂರು ಜಿಲ್ಲೆಯಲ್ಲಿ 274 ಹೊಸ ಪ್ರಕರಣಗಳು ಪತ್ತೆ ; 236 ಮಂದಿ ಆಸ್ಪತ್ರೆಯಿಂದ ಬಿಡುಗಡೆ

11Gubbi Photo 02
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣ ತಪ್ಪಿದೆ. ಶುಕ್ರವಾರ ಒಂದೇ ದಿನ 274 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 8600ಕ್ಕೇರಿದೆ. ಗುಬ್ಬಿ ತಹಸೀಲ್ದಾರ್‌ಗೂ ಸೋಂಕು ದೃಢಪಟ್ಟಿದ್ದು ತಾಲೂಕು ಕಚೇರಿ ಸೀಲ್‌ಡೌನ್ ಮಾಡಲಾಗಿದೆ.

ತುಮಕೂರು ತಾಲೂಕಿನಲ್ಲಿ ಅತಿಹೆಚ್ಚು 101 ಮಂದಿ ಸೋಂಕಿತರು ಪತ್ತೆಯಾಗಿದ್ದು, ತಾಲೂಕು ಒಂದರಲ್ಲೇ ಈವರೆಗೆ ಸೋಂಕಿತರ ಸಂಖ್ಯೆ 3141ಕ್ಕೆ ತಲುಪಿದೆ. ಪಾವಗಡದಲ್ಲಿ 39, ಗುಬ್ಬಿ 27, ತಿಪಟೂರು 20, ಕುಣಿಗಲ್ 17, ಕೊರಟಗೆರೆ 16, ಮಧುಗಿರಿ 16, ಶಿರಾ 15, ತುರುವೇಕೆರೆ 14, ಚಿಕ್ಕನಾಯಕನಹಳ್ಳಿ 9 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಐವರು ಬಲಿ: ಕರೊನಾ ಐವರನ್ನು ಬಲಿ ಪಡೆದಿದೆ. ಶಿರಾ ನಗರದ 45 ವರ್ಷದ ವ್ಯಕ್ತಿ, ಕುಣಿಗಲ್ ತಾಲೂಕು ಎಡೆಯೂರು 70 ವರ್ಷದ ವೃದ್ಧೆ, ಚಿಕ್ಕನಾಯಕನಹಳ್ಳಿ ಪಟ್ಟಣದ ಸರಸ್ವತಿಪುರಂನ 39 ವರ್ಷದ ವ್ಯಕ್ತಿ ಹಾಗೂ ತಿಮ್ಮನಹಳ್ಳಿಯ 63 ವರ್ಷದ ವೃದ್ಧ ಹಾಗೂ ತುಮಕೂರಿನ ಉಪ್ಪಾರಹಳ್ಳಿಯ 77 ವರ್ಷದ ವೃದ್ಧೆ ಸೋಂಕು ತಗುಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

236 ಮಂದಿ ಗುಣಮುಖ: ಶುಕ್ರವಾರ ಒಂದೇ ದಿನ 236 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಈವರೆಗೆ 6505 ಮಂದಿ ಗುಣವಾಗಿದ್ದಾರೆ. ಸದ್ಯ ಒಟ್ಟು 1884 ಸಕ್ರಿಯ ಪ್ರಕರಣಗಳಿದ್ದು ಜಿಲ್ಲಾಸ್ಪತ್ರೆ 21, ಖಾಸಗಿ ಆಸ್ಪತ್ರೆಯಲ್ಲಿ 56 ಒಟ್ಟು 77 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಹಸೀಲ್ದಾರ್‌ಗೂ ಕರೊನಾ : ಗುಬ್ಬಿ ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್‌ಗೆ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನಲೆ ಶುಕ್ರವಾರದಿಂದ 3 ದಿನಗಳ ಕಾಲ ತಾಲೂಕು ಕಚೇರಿ ಸೀಲ್‌ಡೌನ್ ಮಾಡಲಾಗಿದೆ. ಗುರುವಾರ ಕಂದಾಯ ಸಚಿವ ಆರ್.ಅಶೋಕ್ ಇಲಾಖೆ ಪ್ರಗತಿ ಪರೀಶಿಲನೆ ವೇಳೆ ಪ್ರದೀಪ್ ಕುಮಾರ್ ಸಹ ಭಾಗವಹಿಸಿದ್ದು ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ ಸಹಜವಾಗಿ ಆತಂಕ ಶುರುವಾಗಿದೆ. ರ‌್ಯಾಪಿಡ್ ಆಂಟಿಜನ್ ಟೆಸ್ಟ್‌ನಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು ಅಗತ್ಯ ಮುಂಜಾಗ್ರತ ಕ್ರಮ ವಹಿಸಲಾಗಿದೆ. ಪ್ರಭಾರ ತಹಸೀಲ್ದಾರ್ ಆಗಿ ತಿಪ್ಪೇಸ್ವಾಮಿ ಅವರನ್ನು ನೇಮಿಸಲಾಗಿದೆ. ಡಾ.ಪ್ರದೀಪ್‌ಕುಮಾರ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಅವರ ಕುಟುಂಬದ ಮೂವರು ಸದಸ್ಯರನ್ನು ಹೋಂ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.

ರೌಡಿಶೀಟರ್‌ಗೆ ಸೋಂಕು : ತುಮಕೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಎಚ್.ರವಿಕುಮಾರ್ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ ರೌಡಿಶೀಟರ್ ಸುಜಯ್ ಭಾರ್ಗವ್‌ಗೆ ಸೋಂಕು ದೃಢಪಟ್ಟಿದೆ. ಕಳೆದು ತಿಂಗಳು ಮಧುಗಿರಿ ಪಟ್ಟಣದಲ್ಲಿ ನಾಗಾರ್ಜುನ್ ಎಂಬುವರ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಯ್ ಭಾರ್ಗವ್ ಹಾಗೂ ಆತನ ಸಹಚರ ಅಭಿಷೇಕ್‌ನನ್ನು ಶುಕ್ರವಾರ ಮಧುಗಿರಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರು ಪಡಿಸಲು ಕರೆತರಲಾಗಿತ್ತು. ವಿಚಾರಣೆಗೆ ಮುನ್ನ ರ‌್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗಿದ್ದು, ಸುಜಯ್ ಭಾರ್ಗವ್‌ಗೆ ಸೋಂಕು ದೃಢಪಟ್ಟಿದೆ. ಸಹಚರ ಅಭಿಷೇಕ್‌ಗೆ ನೆಗೆಟಿವ್ ಬಂದಿದೆ ಎನ್ನಲಾಗಿದೆ. ಇಬ್ಬರನ್ನೂ ಬೆಂಗಳೂರಿನ ಕಾರಾಗೃಹಕ್ಕೆ ವಾಪಸ್ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net