

ಗೋಣಿಕೊಪ್ಪ: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ, ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಗ್ರಾಪಂ ಆವರಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 28 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಯಿತು. ಕುಂದ ಗ್ರಾಮದಲ್ಲಿ 41.58 ಲಕ್ಷ ರೂ. ಅನುದಾನದಲ್ಲಿ 51 ಮನೆಗಳಿಗೆ ನಲ್ಲಿ ನೀರು ಸಂಪರ್ಕ ಮತ್ತು 20 ಸಾವಿರ ಲೀಟರ್ ನೀರಿನ ಟ್ಯಾಂಕ್, ಅತ್ತೂರು ಗ್ರಾಮದಲ್ಲಿ 93.33 ಲಕ್ಷ ರೂ. ವೆಚ್ಚದಲ್ಲಿ 220 ಮನೆಗಳಿಗೆ ನಲ್ಲಿ ನೀರು ಸಂಪರ್ಕ ಹಾಗೂ 50 ಸಾವಿರ ಲೀ. ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಅನ್ನು ಉದ್ಘಾಟಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಮ್ಮಟೀರ ದರ್ಶನ್ ನಂಜಪ್ಪ, ತಾ.ಪಂ. ಇಒ ಕೊಣಿಯಂಡ ಸಿ. ಅಪ್ಪಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಯೋಗೇಶ್‌ಗೌಡ ಇದ್ದರು.