271 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

24Ravig7
ಬೆಳಗಾವಿ ಜಿಪಂ ಸಭಾಂಗಣದಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ಧತೆ ಸಭೆ ಜರುಗಿತು. ಡಿಸಿ ನಿತೇಶ ಪಾಟೀಲ, ಎಸ್ಪಿ ಡಾ.ಸಂಜೀವ ಪಾಟೀಲ, ಡಿಡಿಪಿಐಗಳಾದ ಬಸವರಾಜ ನಾಲತವಾಡ, ಮೋಹನ ಹಂಚಾಟೆ, ನೋಡಲ್ ಅಧಿಕಾರಿ ಸುಜಾತಾ ಬಾಳೇಕುಂದ್ರಿ ಇತರರಿದ್ದರು.
Published on

ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 33,182 ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 45,590 ಹೀಗೆ ಒಟ್ಟು 78,772 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುತ್ತಿದ್ದು, ಮೂಲಭೂತ ಸೌಲಭ್ಯಗಳೊಂದಿಗೆ ಬೆಳಗಾವಿಯಲ್ಲಿ 120 ಹಾಗೂ ಚಿಕ್ಕೋಡಿ ಜಿಲ್ಲೆಯಲ್ಲಿ 151 ಒಟ್ಟು 271 ಪರೀಕ್ಷಾ ಕೆಂದ್ರ ತೆರೆಯಲಾಗಿದ್ದು ಮಾ. 31ರಿಂದ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪರೀಕ್ಷೆಯ ಪೂರ್ವಸಿದ್ಧತಾ ಸಭೆ ನಡೆಸಿ, ಎರಡೂ ಶೈಕ್ಷಣಿಕ ಜಿಲ್ಲೆಯಿಂದ ಕ್ಲಸ್ಟರ್ ಸಹಿತ 101 ಹಾಗೂ ಕ್ಲಸ್ಟರ್ ರಹಿತ 170 ಒಟ್ಟು 271 ಪರೀಕ್ಷಾ ಕೇಂದ್ರಗಳು ಇವೆ. ಪ್ರಶ್ನೆ ಪತ್ರಿಕೆಗಳನ್ನು ಸಕಾಲದಲ್ಲಿ ಆಯಾ ಕೇಂದ್ರಗಳಿಗೆ ತಲುಪಿಸಲು ಬೆಳಗಾವಿಯಲ್ಲಿ 49 ಹಾಗೂ ಚಿಕ್ಕೋಡಿಯಲ್ಲಿ 58 ಒಟ್ಟು 107 ಮಾರ್ಗ ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳು, ಮಾರ್ಗಾಧಿಕಾರಿಗಳಿಗೆ ಪೊಲೀಸ್ ಭದ್ರತೆ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸಕಾಲದಲ್ಲಿ ಪರೀಕ್ಷೆಗೆ ಹಾಜರಾಗಲು ಸಾರಿಗೆ ಇಲಾಖೆಯು ಸುಗಮ ಸಾರಿಗೆ ವ್ಯವಸ್ಥೆ ಮಾಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಹಾಗೂ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆಯಿಂದ ಶುಶ್ರೂಷಕ ಸಹಾಯಕರು ಹಾಗೂ ಕೊಠಡಿ ಮೇಲ್ವಿಚಾರಕರನ್ನು ಪ್ರತಿ ಕೇಂದ್ರಕ್ಕೆ ನೇಮಕ ಮಾಡಿಕೊಳ್ಳಬೇಕೆಂದು ಸೂಚಿಸಿದರು. ಜಿಲ್ಲಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಸುಜಾತಾ ಬಾಳೇಕುಂದ್ರಿ, ಎರಡೂ ಜಿಲ್ಲೆಯಿಂದ ಕೈಗೊಳ್ಳಲಾದ ಪರೀಕ್ಷಾ ಪೂರ್ವ ತಯಾರಿ, ಅಂಕಿಸಂಖ್ಯಾ ವಿವರಿಸಿದರು. ಎಸ್ಪಿ ಡಾ.ಸಂಜೀವ ಪಾಟೀಲ, ಡಿಡಿಪಿಐಗಳಾದ ಬಸವರಾಜ ನಾಲತವಾಡ, ಮೋಹನ ಹಂಚಾಟೆ ಸೇರಿ ಮುಖ್ಯ ಅಧೀಕ್ಷಕರು, ಬಿಇಒಗಳು, ನೋಡಲ್ ಅಧಿಕಾರಿಗಳು, ವಿಷಯ ಪರಿವೀಕ್ಷರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net