ಜಿಲ್ಲೆಯಲ್ಲಿ 271 ಮಕ್ಕಳು ಶಾಲೆಯಿಂದ ಹೊರಕ್ಕೆ

RAVISHANKARAREDDY ddpi (2)
Published on

ಚಿತ್ರದುರ್ಗ: ಶಿಕ್ಷಣ ಇಲಾಖೆ ಜುಲೈ 28ರಂದು ನಡೆಸಿದ ವಿಶೇಷ ಸಮೀಕ್ಷಾ ಕಾರ್ಯದಲ್ಲಿ, ಜಿಲ್ಲೆಯಲ್ಲಿ ಶಾಲೆಯಿಂದ ಹೊರ ಗುಳಿದ 271 ಮಕ್ಕಳು ಪತ್ತೆ ಆಗಿದ್ದಾರೆ ಎಂದು ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ.

1799 ಜನ ವಸತಿ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯ ನಡೆಸಲಾಗಿದೆ. ನಗರಸಭೆ, ಪುರಸಭೆ, ಪಟ್ಟಣ, ಗ್ರಾಮ, ತಾಂಡಾ, ಕೈಗಾರಿಕಾ ಸ್ಥಳ, ಕೃಷಿ ಕಾರ್ಮಿಕ ವಲಯಗಳು, ಕೊಳಗೇರಿ, ಹೋಟೆಲ್, ಸಂತೇಮೈದಾನ, ಗ್ಯಾರೇಜ್, ಬಸ್ಸು ಹಾಗೂ ರೈಲ್ವೆ ನಿಲ್ದಾಣ ಇತರ ಸ್ಥಳದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ.

ಶಾಲೆಯಿಂದ ಹೊರಗುಳಿದಿರುವ 271 ಮಕ್ಕಳಲ್ಲಿ, ಪ್ರವೇಶ ಪಡೆದ ಬಳಿಕ ಶಾಲೆ ಬಿಟ್ಟವರು 231, ಶಾಲೆಗೆ ದಾಖಲಾಗದ 40 ಮಕ್ಕಳಿದ್ದಾರೆ.

ಚಿತ್ರದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು 70 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 28 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯದ ಸೇರಿದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 11ರಿಂದ 14 ವಯೋಮಾನದ 145 ಹಾಗೂ 15ರಿಂದ 16 ವಯೋಮಾನದ 70 ಮಕ್ಕಳು ಹೊರಗುಳಿದ್ದಾರೆ. ಇವರಲ್ಲಿ ಗಂಡು ಮಕ್ಕಳೇ ಹೆಚ್ಚಿದ್ದಾರೆ.

ಈ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ದಾಖಲಾತಿ ಆಂದೋಲನ, ವಿಶೇಷ ದಾಖಲಾತಿ ಆಂದೋಲನ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಲಿಂಗತಾರತಮ್ಯ ಮತ್ತಿತರ ಸಾಮಾಜಿಕ ಪಿಡುಗಳ ಕುರಿತು ಪಾಲಕರು ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸಲು ಕಾರ‌್ಯಕ್ರಮಗಳನ್ನು ಆಯೋಜಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net