

ದಾಂಡೇಲಿ: ಇಲ್ಲಿಯ ಹಳಿಯಾಳ ರಸ್ತೆಯ ವಾಮನ ಪೆಡ್ಲೆಕರ್ ಎಂಬುವರ ಮನೆ ಮೇಲೆ ಗುರುವಾರ ಬೆಳಗ್ಗೆ ಬೃಹತ್ ಮರ ಬಿದ್ದಿದೆ. ಆದರೆ, ಸುದೈವ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ದಾಂಡೇಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜುಲೈ ತಿಂಗಳೊಂದರಲ್ಲೇ ಸುಮಾರು 27 ಮರಗಳು ಧರೆಗೆ ಉರಳಿವೆ. ವಾಹನ ಸಂಚಾರಕ್ಕೆ ಕೆಲ ಕಾಲ ಅಡ್ಡಿ ಉಂಟಾಗಿದೆ ಹೊರತು, ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿಲ್ಲ.
ಸ್ಥಳೀಯ ಅರಣ್ಯ ಇಲಾಖೆ ಈಗಾಗಲೇ ದಾಂಡೇಲಿ ಹಾಗೂ ಸುತ್ತಮುತ್ತ ಜನ ಸಂಚರಿಸುವ ಪ್ರದೇಶದಲ್ಲಿ ಸುಮಾರು 59 ಗಿಡಗಳನ್ನು ಗುರುತಿಸಿದೆ. ಸ್ಥಳೀಯ ನಗರಸಭೆ ಕೂಡ ಮರಗಳನ್ನು ಗುರುತಿಸುವ ಕಾರ್ಯದಲ್ಲಿ ನಿರತವಾಗಿದೆ.
ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಪರವಾನಗಿ ಪಡೆದು, ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಧರೆಗುರುಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.