

ಚನ್ನಗಿರಿ: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಪ್ರತಿಷ್ಟಾಪಿಸಿದ್ದ ಹಿಂದು ಏಕತಾ ಗಣಪತಿಯನ್ನು ಅದ್ದೂರಿ ಮೆರವಣಿಗೆಯೊಂದಿಗೆ ಮುಖ್ಯ ಬಸ್ ನಿಲ್ದಾಣದ ಬಳಿಯ ಗಣಪತಿ ಹೊಂಡದಲ್ಲಿ ಭಾನುವಾರ ವಿಸರ್ಜನೆ ಮಾಡಲಾಯಿತು.
ಬೆಳಗ್ಗೆ 12 ಗಂಟೆಗೆ ವಿಘ್ನ ನಿವಾರಕನಿಗೆ ಸಕಲ ಗೌರವದೊಂದಿಗೆ ಪೂಜೆ ಸಲ್ಲಿಸಿ ವಾಹನದಲ್ಲಿ ಕೂರಿಸಲಾಯಿತು. ದಾರಿಯುದ್ದಕ್ಕೂ ಭಕ್ತರು ಗಣಪತಿಗೆ ಪೂಜೆ ಸಲ್ಲಿಸಿ ಹೂವನ್ನು ಹಾಕಿದರು. ಡೊಳ್ಳು, ತಮಟೆ, ವೀರಗಾಸೆ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.
ಡಿಜೆ ಸದ್ದಿಗೆ ಭಕ್ತರು ಕುಣಿದು ಕುಪ್ಪಳಿಸಿದರು. ಸಮಿತಿಯವರು ರಸ್ತೆಯುದ್ದಕ್ಕೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು.
9ನೇ ವರ್ಷದ ಗಣೇಶನ ಹಬ್ಬದ ಪ್ರಯುಕ್ತ ಸೆ. 7ರಂದು ಪ್ರತಿಷ್ಟಾಪನೆ ನೆರವೇರಿಸಿ 9 ದಿನಗಳ ಕಾಲ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ 27 ವಿವಿಧ ಸಮಾಜದವರು ಸಂಘಟಿತರಾಗಿ ಗಣೇಶನನ್ನು ಪ್ರತಿಷ್ಟಾಪಿಸಿದ್ದರು.
ಪೊಲೀಸರು ವಿಸರ್ಜನೆಗೆ ಬಿಗಿ ಬಂದೋಬಸ್ತ್ ಮಾಡಿದ್ದು, ಡಿಎಸ್‌ಪಿ 3, ಸಿಪಿಐ 6, ಪಿಎಸ್‌ಐ 12, ಎಎಸ್‌ಐ 20, ಎಚ್‌ಸಿ ಪಿಸಿ 108, ಗೃಹರಕ್ಷಕ ದಳ 211, ಕೆಎಸ್‌ಆರ್‌ಪಿ 2, ಡಿಎಆರ್ 4, ದ್ರೋನ್ 01, ಕ್ಯೂಆರ್‌ಟಿ 1 ತರಿಸಲಾಗಿತ್ತು.
ಎಸ್ಪಿ ಉಮಾಪ್ರಶಾಂತ್, ಡಿಎಸ್‌ಪಿ ರುದ್ರಪ್ಪ ಉಜ್ಜನಕೊಪ್ಪ, ಸಮಿತಿ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್, ಕಾಫಿಪುಡಿ ಶಿವಾಜಿರಾವ್, ರವಿಕುಮಾರ್, ಪಿ.ಆರ್. ಮಂಜುನಾಥ್ ಇದ್ದರು.