

ಲಿಂಗಸುಗೂರು: ಜನರಿಗೆ ಶುದ್ಧ ಕುಡಿವ ನೀರು ಪೂರೈಕೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಆರ್‌ಒ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ 27 ಘಟಕಗಳು ಸ್ಥಗಿತಗೊಂಡಿದ್ದು, ಜನರು ಪರದಾಡುವಂತಾಗಿದೆ.
ತಾಲೂಕಿನಲ್ಲಿ 2011-12ನೇ ಸಾಲಿನಿಂದ 2022-23ರವರೆಗೆ 117 ಆರ್‌ಒ ಪ್ಲಾಂಟ್‌ಗಳನ್ನು ಸ್ಥಾಪಿಸಲಾಗಿದೆ. ಬಹಳಷ್ಟು ಘಟಕಗಳು ನಿರ್ವಹಣೆ ಇಲ್ಲದೆ ಬಂದ್ ಆಗಿವೆ. ಸ್ಥಗಿತಗೊಂಡ ಸಾಕಷ್ಟು ಪ್ಲಾಂಟ್‌ಗಳು ದುಸ್ಥಿತಿಯಲ್ಲಿವೆ.
ಘಟಕಗಳನ್ನು ಅಳವಡಿಸಿ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳ ಸುಪರ್ದಿಗೆ ಒಪ್ಪಿಸಿದ್ದು, ನಿರ್ವಹಣೆ ಕೊರತೆ ಎದ್ದು ಕಾಣುತ್ತಿವೆ. ಘಟಕಗಳನ್ನು ಪೂರ್ಣಗೊಳಿಸಿದರೂ ಹಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಹಸ್ತಾಂತರ ಮಾಡಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಕೆಲವೆಡೆ ಯಂತ್ರೋಪಕರಣಗಳು ಹಾಳಾಗಿವೆ. ಇದರಿಂದ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿವ ನೀರು ಮರೀಚಿಕೆಯಾಗಿದೆ.
ಆರ್‌ಒ ಪ್ಲಾಂಟ್‌ಗಳ ನಿರ್ವಹಣೆಗೆ ಸಂಘ-ಸಂಸ್ಥೆಗಳು, ಖಾಸಗಿಯವರಿಗೆ ಗುತ್ತಿಗೆ ನೀಡಲು ಪಿಡಿಒಗಳು ಮುಂದಾದರೂ ಯಾರೂ ಮುಂದೆ ಬರುತ್ತಿಲ್ಲ. ಕೆಟ್ಟು ನಿಂತ ಹಾಗೂ ಹಸ್ತಾಂತರ ಮಾಡದೇ ಇರುವ ಗುತ್ತಿಗೆದಾರರಿಗೆ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಅನೇಕ ಬಾರಿ ನೋಟಿಸ್ ನೀಡಿದರೂ ಕ್ಯಾರೇ ಎನ್ನುತ್ತಿಲ್ಲ.
ಹೀಗಾಗಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಪಂ ಹಾಗೂ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಕಾಳಜಿ ತೋರಿ ಬಂದ್ ಆಗಿರುವ ಶುದ್ಧ ನೀರಿನ ಘಟಕಗಳನ್ನು ಮರು ಆರಂಭಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಹೊಸದಾಗಿ ಟೆಂಡರ್: ಕೆಕೆಆರ್‌ಡಿಬಿ ಯೋಜನೆಯಡಿ ಕೋಮನೂರು, ಮಲ್ಲಾಪುರ, ಆನ್ವರಿ, ಗೊರೇಬಾಳ ತಾಂಡಾ, ಯರಗುಂಟಿ, ಕಡ್ಡೋಣ, ಹಾಲಬಾವಿ ತಾಂಡಾ, ಬೆಂಚಲದೊಡ್ಡಿ ತಾಂಡಾಗಳಲ್ಲಿ ಆರ್‌ಒ ಪ್ಲಾಂಟ್ ಅಳವಡಿಸಲು 2023-24ರಲ್ಲಿ ಟೆಂಡರ್ ಕರೆಯಲಾಗಿದ್ದು, ಕಾಮಗಾರಿ ಆರಂಭಿಸಲಾಗಿದೆ.
ಎಲ್ಲೆಲ್ಲಿ ಬಂದ್ ?: ಲಿಂಗಸುಗೂರು ತಾಲೂಕಿನಲ್ಲಿ ಒಟ್ಟು 117 ಆರ್‌ಒ ಪ್ಲಾಂಟ್‌ಗಳನ್ನು ಅಳವಡಿಸಲಾಗಿದೆ. ಈ ಪೈಕಿ 90 ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೆ, 27 ಸ್ಥಗಿತಗೊಂಡಿವೆ. ಯರಜಂತಿ, ಗೊಲಪಲ್ಲಿ, ಹೊಸೂರು, ಬೆಂಚಲದೊಡ್ಡಿ, ಬಂಡೇಬಾವಿ, ಮಾಚನೂರು, ಐದಬಾವಿ, ಯರಗೋಡಿ, ದೇವರಭೂಪುರ, ಕೋಠಾ, ನಾಗರಹಾಳ, ಚಿಕ್ಕ ಉಪ್ಪೇರಿ, ಈಚನಾಳ ತಾಂಡಾ, ಹಾಲಬಾವಿ, ಹೊನ್ನಳ್ಳಿ, ಕೆಸರಟ್ಟಿ, ಅಂಕನಾಳ, ಕಾಚಾಪುರ, ಉಪ್ಪಾರ ನಂದಿಹಾಳ, ಕನ್ನಾಪುರಹಟ್ಟಿ, ಪೈದೊಡ್ಡಿ, ಜಾಲಿಬೆಂಚಿ, ಹಂಚಿನಾಳ, ಗೋನವಾಟ್ಲ ತಾಂಡಾ, ಗುಂತಗೋಳ, ಸರ್ಜಾಪುರದಲ್ಲಿ ಆರ್‌ಒ ಪ್ಲಾಂಟ್‌ಗಳು ಸ್ಥಗಿತಗೊಂಡಿವೆ.
===========
ಬಹುತೇಕ ಆರ್‌ಒ ಪ್ಲಾಂಟ್‌ಗಳನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ಹಸ್ತಾಂತರ ಮಾಡದೇ ಇರುವ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ದುಸ್ಥಿತಿಯಲ್ಲಿರುವ ಘಟಕಗಳ ರಿಪೇರಿ ಮಾಡುವಂತೆಯೂ ತಿಳಿಸಲಾಗಿದೆ.
> ಪರಮೇಶ್ವರ ಟೆಂಗಳೇಕರ್, ಎಇಇ, ಗ್ರಾಮೀಣ ಕುಡಿವ ನೀರು, ನೈರ್ಮಲ್ಯಉಪವಿಭಾಗ, ಲಿಂಗಸುಗೂರು