

ಹುಬ್ಬಳ್ಳಿ: ಜೆಪಿ ಮೋರ್ಗನ್ ಎಕ್ಸ್‌ಚೇಂಜ್ ಗ್ರೂಪ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ಅಪರಿಚಿತರು, ಇಲ್ಲಿಯ ಗೋಕುಲ ರಸ್ತೆಯ ಸೋಮಶೇಖರ ಎನ್ನುವವರಿಂದ 27.78ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ ಈ ಮಾಹಿತಿ ಸೋಮಶೇಖರಗೆ ಲಭ್ಯವಾಗಿದೆ. ಆಗ ಲಿಂಕ್ ಕ್ಲಿಕ್ ಮಾಡಿದ್ದಾರೆ. ಆಗ ಅದು ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರ್ಪಡೆಯಾಗಿ ಹಣ ಹೂಡುವಂತೆ ಪ್ರೇರೇಪಿಸಿದ್ದಾರೆ. ಹೂಡಿಕೆ ಮಾಡಿದ್ದಕ್ಕೆ ಲಾಭಾಂಶವನ್ನೂ ಕೊಟ್ಟಿದ್ದಾರೆ. ಇದನ್ನು ನಂಬಿ ಹಂತ ಹಂತವಾಗಿ ವಿವಿಧ ಖಾತೆಗಳಿಂದ 27,78,200 ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸೋಮಶೇಖರ ಅವರು ದೂರಿನಲ್ಲಿ ವಿವರಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.