ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 27.33 ಲಕ್ಷ ನಿವ್ವಳ ಲಾಭ

25ss1Shesadri maatu
ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಎಚ್.ಪಿ.ಶೇಷಾದ್ರಿ ಮಾತನಾಡಿದರು. ಉಪಾಧ್ಯಕ್ಷ ತೀರ್ಥಾನಂದ್, ನಿರ್ದೇಶಕರಾದ ನಾಗಪ್ಪ, ಧರ್ಮಪ್ಪ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್‌ಕುಮಾರ್ ಇತರರು ಇದ್ದರು.
Published on

ಶನಿವಾರಸಂತೆ: ಸಮೀಪದ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಸಭೆ ಸಂಘದ ಅಧ್ಯಕ್ಷ ಎಚ್.ಬಿ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಸಂಘದ ಹಿರಿಯ ಲೆಕ್ಕಾಧಿಕಾರಿ ಎಚ್.ಆರ್.ಧರಣಿ ಆಡಳಿತ ಮಂಡಳಿಯ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು.
ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2577 ಸದಸ್ಯರಿದ್ದು, ಷೇರು ಹಣ 1.69 ಕೋಟಿ ರೂ. ಇದೆ. ಇದರಲ್ಲಿ ಸರ್ಕಾರದ ಷೇರು 2.18 ಲಕ್ಷ ರೂ.ಇದೆ. ಸಂಘದ ಒಟ್ಟು ದುಡಿಯುವ ಬಂಡವಾಳ 20.46 ಕೋಟಿ ರೂ. ಇದೆ. ಡಿಸಿಸಿ ಬ್ಯಾಂಕ್ ಪಾಲುಹಣ 72,50,000 ರೂ. ಇದ್ದು ಸಂಘದ ಕ್ಷೇಮನಿಧಿ 73,33,275 ರೂ., 2024ನೇ ಸಾಲಿಗೆ 27,33,168 ರೂ. ನಿವ್ವಳ ಲಾಭಗಳಿಸಿದ್ದು ಸಂಘ ಕಳೆದ ಸಾಲಿಗೆ 15.60 ಕೋಟಿ ರೂ. ವಿತರಿಸಿದ್ದು ಇದರಲ್ಲಿ 14.82 ಕೋಟಿ ರೂ. ಕೆಸಿಸಿ ಸಾಲ ವಿತರಿಸಿದೆ. ಡಿಸಿಸಿ ಬ್ಯಾಂಕ್‌ನಿಂದ 14.51 ಕೋಟಿ ರೂ. ಪಡೆದುಕೊಂಡು ಪೂರ್ತಿ ಹಣವನ್ನು ಪಾವತಿಸಿದೆ. 77 ಲಕ್ಷ ರೂ. ಆಭರಣ ಸಾಲ ಮತ್ತು ಇತರ ಸಾಲವನ್ನು ವಿತರಣೆ ಮಾಡಿದೆ ಎಂದು ಎಚ್.ಆರ್.ಧರಣಿ ಹೇಳಿದರು.


ಸಂಘದ ಅಭಿವೃದ್ಧಿ ಕುರಿತಾಗಿ ಸಹಕಾರಿ ಪ್ರಮುಖರಾದ ಸುಬ್ಬಪ್ಪ, ಎಸ್.ಎಂ.ಉಮಾಶಂಕರ್ ಮತ್ತಿತರರು ಚರ್ಚೆ ನಡೆಸಿದರು. ಕಳೆದ ಸಾಲಿಗಿಂತ ಈ ಸಾಲಿನಲ್ಲಿ 3 ಲಕ್ಷ ರೂ. ಹೆಚ್ಚು ಲಾಭಗಳಿಸಿರುವುದರಿಂದ ಸಂಘದ ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡುವಂತೆ ಸಭೆಯಲ್ಲಿ ನಿರ್ಣಹಿಸಲಾಯಿತು.
ಶನಿವಾರಸಂತೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್‌ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕ್ ಸಾಲ ವ್ಯವಹಾರ ಹೊರತಾಗಿ ಇತರ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ವೃತ್ತಿಪರ ಶಿಕ್ಷಣ ಮತ್ತು ಉನ್ನತ್ತ ಶಿಕ್ಷಣಕ್ಕಾಗಿ 2 ಲಕ್ಷದಿಂದ 60 ಲಕ್ಷದವರೆಗೆ ಶಿಕ್ಷಣ ಸಾಲವನ್ನು ನೀಡುತ್ತಿದ್ದು ಇದರ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಪಿ.ಶೇಷಾದ್ರಿ, ಕೃಷಿ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಿ ಈ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕು. ಕೃಷಿ ಸಾಲ, ಇತರ ಸಾಲ, ಆಭರಣ ಸಾಲಗಳನ್ನು ನೀಡುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಸಂಘ ಉತ್ತಮ ಲಾಭಗಳಿಸಿದ್ದು ಈ ನಿಟ್ಟಿನಲ್ಲಿ ಸಹಕಾರಿ ಸದಸ್ಯರು ಇನ್ನು ಮುಂದೆಯೂ ಇದೆ ರೀತಿಯಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.


ಸಭೆಯಲ್ಲಿ ಸಂಘದ ಉಪಾಧ್ಯಕ್ಷ ತೀರ್ಥಾನಂದ್, ನಿರ್ದೇಶಕರಾದ ಎನ್.ಬಿ.ನಾಗಪ್ಪ, ಎಂ.ಎಸ್.ತಂಗಮ್ಮ, ಜಿ.ಬಿ.ಲಿಂಗರಾಜು, ಡಿ.ಬಿ.ಧರ್ಮಪ್ಪ, ಎಸ್.ಆರ್.ಕಾರ್ತಿಕ್, ಜಗದೀಶ್, ಪೊನ್ನಪ್ಪ, ದೊಡ್ಡೇಗೌಡ, ಪುಟ್ಟಯ್ಯ, ಕೆಡಿಸಿಸಿ ಬ್ಯಾಂಕ್ ಪರ ನಿರ್ದೇಶಕಿ ಎಂ.ಕೆ.ಲಲಿತಾ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಇ.ಹೂವಣ್ಣ ಇದ್ದರು. ಹಿರಿಯ ಸಹಕಾರಿ ಸುಬ್ಬಪ್ಪ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net