

ಮೂಡಿಗೆರೆ: ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ಡಿ.27 ಮತ್ತು 28 ರಂದು ಕೃಷಿ ಮತ್ತು ತೋಟಗಾರಿಕೆ ಮೇಳ, ಸುಸ್ಥಿರ ಕೃಷಿಗೆ ವಿನೂತನ ತಂತ್ರಜ್ಞಾನ ಎಂಬ ಧ್ಯೇಯವಾಕ್ಯದೊಂದಿಗೆ ಕೆವಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಶ್ರೀನಿವಾಸ್ ತಿಳಿಸಿದರು.
ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಳದಲ್ಲಿ ವಿಶೇಷ ಆಕರ್ಷಣೆಯಾಗಿ ಕೃಷಿಯಲ್ಲಿ ಡ್ರೋನ್ ಬಳಕೆ ಪ್ರಾತ್ಯಕ್ಷಿಕೆ, ಮಾಧ್ಯಮಿಕ ಕೃಷಿ ಮತ್ತು ಭತ್ತದ ಸಾಂಪ್ರದಾಯಿಕ ತಳಿಗಳ ಪ್ರಾತ್ಯಕ್ಷಿಕೆ, ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ ವಿಧಾನ, ವೈಜ್ಞಾನಿಕ ಮೀನು ಕೃಷಿ, ವಿದೇಶಿ ಹಣ್ಣಿನ ಬೆಳೆಗಳ ಪ್ರಾತ್ಯಕ್ಷಿಕೆ, ಹವಾಮಾನ ಆಧಾರಿತ ಕೃಷಿ, ಅಧಿಕ ಇಳುವರಿಯ ಭತ್ತದ ತಳಿಗಳ ಪ್ರಾತ್ಯಕ್ಷಿಕೆ, ಎರೆಹುಳು ಗೊಬ್ಬರ ತಯಾರಿಕೆ, ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಯುವ ವಿಧಾನದ ಪ್ರಾತ್ಯಕ್ಷಿಕೆ, ವಿಜ್ಞಾನಿಗಳೊಂದಿಗೆ ರೈತರಿಂದ ವಿಚಾರ ವಿನಿಮಯ, ಪ್ರಗತಿಪರ ಕೃಷಿಕರಿಗೆ ಸನ್ಮಾನ, ವಿವಿಧ ಕೃಷಿ ಸಂಬಂಧಿತ ಇಲಾಖೆಗಳ ಹಾಗೂ ಕೃಷಿ ಪರಿಕರಗಳ ಸಂಸ್ಥೆಗಳಿಂದ ಬೀಜ, ಗೊಬ್ಬರ, ಸಸ್ಯ ಸಂರಕ್ಷಣೆ ಮತ್ತು ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ಹಾಗೂ ವಿವಿಧ ತಳಿಗಳ ಕೋಳಿ, ಕುರಿ ಮತ್ತು ಜಾನುವಾರುಗಳ ಪ್ರದರ್ಶನ, ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೆವಿಕೆ ಮುಖ್ಯಸ್ಥ ಡಾ. ಎ.ಟಿ.ಕೃಷ್ಣಮೂರ್ತಿ ಮಾತನಾಡಿ, ಯಾಂತ್ರೀಕರಣ ಮತ್ತು ಕೃಷಿ ಸಂಬಂಧಿತ ವಿವಿಧ ವಸ್ತುಗಳ 100 ಮಳಿಗೆಗಳನ್ನು ತೆರೆಯಲಾಗುವುದು. ರಾಸಾಯನಿಕಮುಕ್ತ ಕೃಷಿ ವಿಧಾನದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ, ಅತಿವೃಷ್ಟಿಯಿಂದಾದ ಜಮೀನು ಮತ್ತು ಬೆಳೆ ಹಾನಿಗೆ ಸೂಕ್ತ ರೀತಿಯಲ್ಲಿ ಪರಿಹಾರ ನೀಡಬೇಕು. ಈ ಬಗ್ಗೆ ಕೃಷಿ ಮೇಳದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಡಿ.ಎಲ್.ಅಶೋಕ್‌ಕುಮಾರ್, ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಎಚ್.ಕೆ.ಪೂರ್ಣೇಶ್, ಪಿ.ಕೆ.ನಾಗೇಶ್, ಡಾ. ಸಿ.ಕೆ.ಪ್ರಮೀಳಾ, ಡಾ. ಎ.ವಿ.ಸ್ವಾಮಿ ಇದ್ದರು