26ರಿಂದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ

Published on

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಸೆ.26ರಿಂದ ಅಕ್ಟೋಬರ್ 3ರವರೆಗೆ ಅರಮನೆಯ ಪ್ರಮುಖ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಸಿದ್ಧಗೊಂಡಿದೆ.
ಸೆ.26ರ ಸಂಜೆ 5.30 ರಿಂದ 6 ಗಂಟೆಯವರೆಗೆ ಯದುನಾಥ್ ಮತ್ತು ಗುರುರಾಜ್ ತಂಡದವರಿಂದ ನಾದಸ್ವರ, ಕಿರಾಳು ಮಹೇಶ್ ಮತ್ತು ತಂಡದಿಂದ ವೀರಭದ್ರ ಕುಣಿತ ಇರಲಿದೆ. ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವವರಾಜ ಬೊಮ್ಮಾಯಿ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಂಜೆ 7 ರಿಂದ 8 ಗಂಟೆವರೆಗೆ ಅಮೃತ ಭಾರತಿಗೆ ಕನ್ನಡದಾರತಿ ಸಪ್ತಸ್ವರ ಆರ್ಟ್ಸ್ ಮತ್ತು ಕ್ರಿಯೇಷನ್ ಬೆಂಗಳೂರು ಅವರಿಂದ ನೃತ್ಯರೂಪಕ, ಸಂಜೆ 8 ರಿಂದ 9.30 ರವರೆಗೆ ಎಚ್.ಆರ್.ಲೀಲಾವತಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ಇರಲಿದೆ.
ಸೆ.27ರ ಸಂಜೆ 5.30 ರಿಂದ 6 ಗಂಟೆವರೆಗೆ ಕಂಸಾಳೆ ಮಹೇಶ್ ಮತ್ತು ತಂಡದಿಂದ ಕಂಸಾಳೆ, 6 ರಿಂದ 7 ಇಂದೂ ನಾಗರಾಜು ಮತ್ತು ಲಕ್ಷ್ಮೀ ನಾಗರಾಜು ತಂಡದಿಂದ ಭಕ್ತಿ ಸಂಗೀತ, 7 ರಿಂದ 8 ಲಯಾಭಿನಯ ಕಲ್ಚರಲ್ ಫೌಂಡೇಷನ್‌ನಿಂದ ನೃತ್ಯರೂಪಕ- ಲಲಿತಾರ್ಣವ ಹಾಗೂ 8 ರಿಂದ 9.30 ವಿದ್ವಾನ್ ಸಂದೀಪ್ ನಾರಾಯಣ್‌ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಲಾಗುವುದು.
ಸೆ.28ರ ಸಂಜೆ 5.30 ರಿಂದ ಕರ್ನಾಟಕ ಕಲಾಶ್ರೀ ವಿದ್ವಾನ್ ಸಿ.ರಾಮದಾಸ್ ಅವರಿಂದ ಹಾರ್ಮೋನಿಯಂ, ಸಂಜೆ 6ಕ್ಕೆ ಪಂಡಿತ ಗಣಪತಿ ಭಟ್ ಹಾಸಣಗಿ ಯಲ್ಲಾಪುರ ಅವರಿಂದ ದಾಸರಪದ, ರಾತ್ರಿ 8 ಗಂಟೆಗೆ ಕರ್ನಾಟಕ ಕಲಾ ಸತ್ಯನಾರಾಯಣರಾಜು ಮತ್ತು ತಂಡದವರಿಂದ ಭರತನಾಟ್ಯ, 9.30ರಿಂದ ಮುಂಬೈನ ಉಸ್ತಾದ್ ಫಜಲ್ ಖರೇಷಿ ಅವರಿಂದ ತಬಲ ವಾದನ ಮೋಡಿ ಮಾಡಲಿದೆ.
ಸೆ.29 ಸಂಜೆ 5.30 ರಿಂದ ಪೊಲೀಸ್ ತಂಡದಿಂದ ಕರ್ನಾಟಿಕ್ ಮತ್ತು ಇಂಗ್ಲಿಷ್ ಬ್ಯಾಂಡ್, ಸಂಜೆ 6 ರಿಂದ ಧಾರವಾಡದ ಪಂಡಿತ್ ವೆಂಕಟೇಶ್‌ಕುಮಾರ್ ಅವರಿಂದ ವಚನ ಗಾಯನ, ಸಂಜೆ 7 ರಿಂದ ಮಧುಲಿತ ಮಹೋಪಾತ್ರ ಮತ್ತು ತಂಡದವರಿಂದ ಓಡಿಸ್ಸಿ ನೃತ್ಯ, ಸಂಜೆ 8 ರಿಂದ ಚಕ್ರ ಫೋನಿಕ್ಸ್ ತಂಡದಿಂದ ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನದ ವಿಶ್ವ ಸಂಗೀತ ಪ್ರಸ್ತುತ ಪಡಿಸಲಾಗುವುದು.
ಸೆ.30 ಸಂಜೆ 5.30 ರಿಂದ ಜ್ಞಾನಮೂರ್ತಿ ಮತ್ತು ತಂಡದಿಂದ ಭಕ್ತಿ ಸಂಗೀತ, ಸಂಜೆ 6 ರಿಂದ ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡ ವಾದ್ಯಗಳಲ್ಲಿ ಒಡೆಯರ ಕೃತಿಗಳು, ಸಂಜೆ 7 ರಿಂದ ಕರ್ನಾಟಕ ಕಲಾಶ್ರೀ ರೂಪಾ ರಾಜೇಶ್ ಮತ್ತು ತಂಡದಿಂದ ಕುಚುಪುಡಿ ನೃತ್ಯ, ಸಂಜೆ 8 ರಿಂದ ಕೋಲ್ಕತ್ತದ ವಿದುಷಿ ಕೌಶಿಕಿ ಚಕ್ರವರ್ತಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇರಲಿದೆ.
ಅ.1 ರಂದು ಸಂಜೆ 5.30 ರಿಂದ ಪನ್ನಗ ವಿಜಯಕುಮಾರ್, ವೇದವ್ಯಾಸ ಸೇವಾ ಟ್ರಸ್ಟ್ ಅವರಿಂದ ಜಾನಪದ ಗಾಯನ, ಸಂಜೆ 6 ರಿಂದ ಸಂಗೀತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಬೆನಕ ತಂಡದಿಂದ ರಂಗಗೀತೆಗಳು, ಸಂಜೆ 7 ರಿಂದ ಪೊಲೀಸ್ ಬ್ಯಾಂಡ್ ಮಾಸ್ ಬ್ಯಾಂಡ್, ಸಂಜೆ 8 ರಿಂದ ಮನೋ ಮ್ಯೂಸಿಕ್ ಲೈನ್ಸ್‌ನಿಂದ ಸಿತಾರ್ ಸಿಂಪೋನಿ ಪ್ರಸ್ತುತಪಡಿಸಲಾಗುವುದು.
ಅ.2 ಸಂಜೆ 6 ರಿಂದ ಕಂಬದ ರಂಗಯ್ಯ ನೇತೃತ್ವದಲ್ಲಿ ವಿವಿಧ ಕಲಾವಿದರಿಂದ ಜನಪದ ಸಂಗೀತ, ಸಂಜೆ 7 ರಿಂದ ಕಿರುತೆರೆ ಕಲಾವಿದರಾದ ರೂಪಿಕಾ ಮತ್ತು ವಂದನ ಸಾರಥ್ಯದಲ್ಲಿ ನೃತ್ಯರೂಪಕ ನವಶಕ್ತಿ ವೈಭವ, ಸಂಜೆ 8 ರಿಂದ ಮನೋಜ್ ವಶಿಷ್ಠ ಮತ್ತು ಅರುಂಧತಿ ವಶಿಷ್ಠ ತಂಡದವರಿಂದ ಸಂಗೀತ ವೈವಿಧ್ಯ ಇರಲಿದೆ.
ಅ.3 ಸಂಜೆ 5.30 ರಿಂದ ವಿಶೇಷ ಕಲಾವಿದರಿಂದ ಕಾರ್ಯಕ್ರಮ, ಸಂಜೆ 6 ರಿಂದ ಗಡುಬಗೆ ಮುನಿರಾಜು ಅವರಿಂದ ಜನಪದ ಸಂಗೀತ, ಸಂಜೆ 7 ರಿಂದ ಸ್ಥಳೀಯ ಕಲಾವಿದರಿಂದ ಪಾರಂಪರಿಕ ನೃತ್ಯ ಸಮ್ಮಿಲನ, ಸಂಜೆ 8 ರಿಂದ ಮುಂಬೈನ ಭಜನ್ ಸಾಮ್ರಾಟ್ ಪದ್ಮಶ್ರೀ ಅನೂಪ್ ಜಲೋಟ ಅವರಿಂದ ಗಜಲ್ ಕಾರ್ಯಕ್ರಮ ಸಂಗೀತ ಪ್ರಿಯರ ಮನಸೂರೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net