26ರಿಂದ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ

2222
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆ.26ರಂದು ಅನಿರ್ದಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಸೋಮವಾರ ಬೆಳಗ್ಗೆ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳು, ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಸೆ.26ರಿಂದ ನಿರ್ದಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿ, ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ತಹಸೀಲ್ದಾರ್ ಅಮೃತ್‌ಆತ್ರೇಶ್ ಮೂಲಕ ಮನವಿ ರವಾನಿಸಿದರು. ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳು: 17ಕ್ಕೂ ಹೆಚ್ಚು ಮೊಬೈಲ್ ಆ್ಯಪ್, ವೈಬ್ ಅಪ್ಲಿಕೇಷನ್ ಸೇರಿ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡವಿದ್ದು, ಮೊಬೈಲ್,ಲ್ಯಾಪ್‌ಟ್ಯಾಪ್, ಇಂಟರ್‌ನೆಟ್, ಸ್ಕ್ಯಾನರ್ ವ್ಯವಸ್ಥೆ ಕಲ್ಪಿಸಬೇಕು. ನೌಕರರಿಗೆ ಉತ್ತಮ ಗುಣಮಟ್ಟದ ಟೇಬಲ್ ಖುರ್ಚಿ ವಿತರಣೆ, ಮೊಬೈಲ್, ಬೀರ್, ಸಿಯುಜಿ ಸಿಮ್, ಪ್ರಿಂಟರ್ ಸೇರಿದಂತೆ ಮೂಲ ಸೌಲಭ್ಯಗಳನ್ನು ನೀಡಬೇಕು. ನೌಕರರು ಪದೋತ್ನತಿಯಲ್ಲಿ ವಂಚಿತರಾಗಿದ್ದು, ವಿವಿಧ ಹುದ್ದೆಗೆ ಮೇಲ್ದರ್ಜೆಗೇರಿಸಿ ಪದೋತ್ನತಿಗೊಳಿಸಬೇಕು. ಅಂತರ್ ಜಿಲ್ಲಾ ಪತಿಪತ್ನಿ ವರ್ಗಾವಣೆ ಪ್ರಕರಣ, ಕಂದಾಯ ಇಲಾಖೆಯಲ್ಲಿ 3 ವರ್ಷ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆ, ಮೊಬೈಲ್ ತಂತ್ರಾಂಶಗಳ ವಿಚಾರವಾಗಿ ಆಗಿರುವ ಅಮಾನತ್ತು ರದ್ದು ಪಡಿಸಬೇಕು. ಪ್ರಯಾಣ ಭತ್ಯೆಯನ್ನು 500ರೂ ರಿಂದ 3ಸಾವಿರ ರೂ ಹೆಚ್ಚಳ ಮಾಡಬೇಕು. ಕೆಲಸ ಆರಂಭ ಮತ್ತು ಅಂತ್ಯ ಎಲ್ಲಾ ಬಗ್ಗೆ ವರ್ಚುವಲ್ ಸಭೆಯನ್ನು ನಿಷೇಧಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳ ಸಂಘದ ಗ್ರಾಮಾಂತರ ಜಿಲ್ಲಾ ಗೌರವಾಧ್ಯಕ್ಷ ಬಾಲಕೃಷ್ಣ, ತಾಲೂಕು ಅಧ್ಯಕ್ಷ ಅಕಾಶ್‌ಗಾಯಕ್‌ವಾಡ್, ಮಾಜಿ ಅಧ್ಯಕ್ಷ ವಾಸುದೇವ್, ಮಂಜುಳಮ್ಮ, ತಾಲೂಕು ಕಾರ್ಯದರ್ಶಿ ಕುಮಾರ್, ಗ್ರಾಮ ಆಡಳಿತಾಧಿಕಾರಿ ಮಾರತಿ, ವೆಂಕಟೇಶ್, ಮಮತ, ಗಾಯಿತ್ರಮ್ಮ, ರೋಹಿತ್, ಮಾದವರಾವ್, ಲೋಕೇಶ್ ಮತ್ತಿತರರು ಉಪಸ್ಥಿತರಿದರು.

ಮನವಿಗೆ ಸಿಕ್ಕಿಲ್ಲ ಸ್ಪಂದನೆ : ಸರ್ಕಾರ ಸಾಕಷ್ಟು ಯೋಜನೆಗಳನ್ನು ಆರ್ಹ ವ್ಯಕ್ತಿಗಳ ಮನೆಬಾಗಿಲಿಗೆ ತಲುಪಿಸುವ ಕಾರ್ಯವನ್ನು ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಮಾಡುತ್ತಿದೆ, 2 ವರ್ಷದಿಂದ ರಜೆ ಇಲ್ಲದೇ ರಜಾ ದಿನದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಕಷ್ಟು ವರ್ಷದಿಂದ ಗ್ರಾಮ ಆಡಳಿತಾಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ರಾಜ್ಯ ಸಂಘದ ನಿರ್ದೇಶನದಂತೆ ಸೆ.26, 27ರಂದು ಪ್ರತಿ ತಾಲೂಕು ಕಚೇರಿ ಆವರಣದಲ್ಲಿ, ಸೆ.28 ಮತ್ತು 29 ಜಿಲ್ಲಾಧಿಕಾರಿ ಕಚೇರಿ ಬಳಿ, ನಂತರ ಸೆ.30ರಿಂದ ರಾಜ್ಯಾದ್ಯಂತ ನಿರ್ದಿಷ್ಠಾವಧಿ ಮುಷ್ಕರ ಮಾಡಲಾಗುವುದು ಎಂದು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಗ್ರಾಮಾಂತರ ಜಿಲ್ಲಾಧ್ಯಕ್ಷ ರಘುಪತಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net