

ಮೈಸೂರು: ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯುಕ್ತ ನಗರದ ವಿಶ್ವಮಾನವ ಸಂಗೀತ ಪ್ರತಿಷ್ಠಾನ ವತಿಯಿಂದ ಕಾಶಿಯಲ್ಲಿ ಶಿವ-ಗಂಗಾ ಗಾನಯಾನ ಮತ್ತು ನಾಲ್ವಡಿ ನಮನ ಕಾರ್ಯಕ್ರಮವನ್ನು ಆ.26ರಂದು ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಆದಿಚುಂಚನಗಿರಿ ವಾರಾಣಸಿ ಶಾಖಾ ಮಠದ ಶ್ರೀ ವಿಜಯೇಂದ್ರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯ ವಿಜ್ಞಾನ ಯೋಗ ಮಹಿಳಾ ವಿಭಾಗದ ಮುಖ್ಯಸ್ಥೆ ಸುನೀತಾ ಸಿಂಗ್, ಕಬಡ್ಡಿ ಮಂಡಳಿಯ ಕರ್ನಾಟಕದ ಕಾರ್ಯಕಾರಿಣಿ ಸಮಿತಿ ಸದಸ್ಯ ಎಂ. ನರಸಿಂಹಮೂರ್ತಿ, ಕರ್ನಾಟಕ ಜಾನಪದ ಪ್ರತಿಷ್ಠಾನದ ಡಾ.ಎಸ್.ಬಾಲಾಜಿ ಮತ್ತಿತರರು ಪಾಲ್ಗೊಳ್ಳುವರು ಎಂದು ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಎಲ್.ಯಮುನಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವ ಮತ್ತು ಗಂಗೆ ಕುರಿತ ಹಾಡುಗಳನ್ನು ಪ್ರಸ್ತುತಪಡಿಸಲಾಗುವುದು. ರಾಜ್ಯದಿಂದ ಪಾಲ್ಗೊಳ್ಳಲಿರುವ 350 ಕಲಾವಿದರು 60 ವಿವಿಧ ಜಾನಪದ ಕಲೆ ಪ್ರದರ್ಶನ ಮಾಡಲಿದ್ದಾರೆ. ನಾಲ್ವಡಿ ಅವರು ಈ ವಿವಿಯ ಸಹ ಸಂಸ್ಥಾಪಕರೂ ಆಗಿರುವ ಹಿನ್ನೆಲೆಯಲ್ಲಿ ಅವರ ಸ್ಮರಣೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.