26ರಂದು ಪ್ರಚಂಡ ರಾವಣ ನಾಟಕ ಪ್ರದರ್ಶನ

26ರಂದು ಪ್ರಚಂಡ ರಾವಣ ನಾಟಕ ಪ್ರದರ್ಶನ
Published on

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಡಿ.26ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಪ್ರಚಂಡ ರಾವಣ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಜಗದೀಶ್ ರಾಮಘಟ್ಟ ಗೊರೂರು ತಿಳಿಸಿದರು.
ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ರಂಗಕರ್ಮಿ ಹಾಗೂ ಕೀರ್ತನಕಾರರಾದ ದಿ. ಡಾ. ರಂಗಪ್ಪದಾಸ್ ಸ್ಮರಣಾರ್ಥ ಹಾಗೂ ಕನ್ನಡ ಚಲನಚಿತ್ರದಲ್ಲಿ ನಟ ಭಯಂಕರ ಎಂದು ಖ್ಯಾತಿ ಪಡೆದ ದಿವಂಗತ ವಜ್ರಮುನಿ ಅಭಿನಯಿಸಿದ ಪ್ರಚಂಡ ರಾವಣ ನಾಟಕವನ್ನು ಹಾಸನ ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘದ ವತಿಯಿಂದ ಜಿಲ್ಲೆಯ ಹೆಸರಾಂತ ಶ್ರೀನಿವಾಸ ಡ್ರಾಮಾ ಸೀನರಿ, ಲಕ್ಷ್ಮಣ್ ಕಡಗ ಇವರ ರಂಗ ಸಜ್ಜಿಕೆಯಲ್ಲಿ ನಾಟಕವನ್ನು ಆಯೋಜಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಿರ್ದೇಶಕರಾದ ವೀರಭದ್ರಾಚಾರ್ ಗಾಡೇನಹಳ್ಳಿ ಇವರ ನಿರ್ದೇಶನದಲ್ಲಿ ಮೂರು ಗಂಟೆಗಳ ಅವಧಿಯಲ್ಲಿ ಪ್ರಚಂಡ ರಾವಣ ನಾಟಕದಲ್ಲಿ ಹೆಸರಾಂತ ಕಲಾವಿದರು ಅಭಿನಯಿಸಲಿದ್ದಾರೆ. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಪಿ. ಸ್ವರೂಪ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಸ್ವಾತಂತ್ರೃ ಹಿರಿಯ ಹೋರಾಟಗಾರ ಎಚ್.ಎಂ. ಶಿವಣ್ಣ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರ ಸಂಘದ ಗೌರವಾಧ್ಯಕ್ಷ ಗೋವಿಂದೇಗೌಡ ಕಾರ್ಲೇ, ಸದಸ್ಯ ಕೆ.ಜಿ. ಈಶ್ವರಪ್ಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ವೇದಾ ಹಾಸನ್, ನಿರ್ದೇಶಕರಾದ ವೀರಭದ್ರಾಚಾರ್, ನಿರಂಜನ್ ಹಂಚೂರು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net