26ರಂದು ಕೊಳ್ಳೇಗಾಲ ಉದ್ಯೋಗ ಮೇಳ

Job Scams
Published on


ಚಾಮರಾಜನಗರ : ಬಿ.ರಾಚಯ್ಯ ಪ್ರತಿಷ್ಠಾನ ವತಿಯಿಂದ ಮಾ.26ರಂದು ಕೊಳ್ಳೇಗಾಲ ನಗರದ ನ್ಯಾಷನಲ್ ಶಾಲೆ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಮಾ.12ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಎಲ್ಲ ತಯಾರಿಯೂ ನಡೆದಿತ್ತು. ಆದರೆ ದಿ.ಆರ್.ಧ್ರುವನಾರಾಯಣ ಅವರು ಅಕಾಲಿಕವಾಗಿ ನಿಧನರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿತ್ತು. ಅವರ 11ನೇ ದಿನದ ಪುಣ್ಯ ಸ್ಮರಣೆ ಬಳಿಕ ಮತ್ತೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 20 ವರ್ಷಗಳಿಂದ ಮೈಸೂರು, ಬೆಂಗಳೂರು, ಚಾಮರಾಜನಗರ, ಸಂತೇಮರಳ್ಳಿ ಭಾಗದಲ್ಲಿ ಬಿ.ರಾಚಯ್ಯ ಪ್ರತಿಷ್ಠಾನ ವತಿಯಿಂದ ಹಲವು ಸಮಾಜಮುಖಿ ಕೆಲಸ ಮಾಡಿಕೊಂಡು ಬರಲಾಗಿದೆ. ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆಯಲ್ಲೂ ಆರೋಗ್ಯ ಶಿಬಿರ ಹಾಗೂ ಉದ್ಯೋಗ ಮೇಳ ನಡೆಸಲಾಗಿತ್ತು. ಇದೀಗ ಕೊಳ್ಳೇಗಾಲದಲ್ಲಿ ನಡೆಸಲಾಗುತ್ತಿದೆ. ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರು ಭಾಗವಹಿಸಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ವಾಟಾಳ್ ಮಠದ ಸೂರ್ಯಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ, ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಆಗಮಿಸಲಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷೆ ಸುಶೀಲಾ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್‌ನಾರಾಯಣ್ ಗುಪ್ತ, ಸದಸ್ಯೆ ಸುಮಾ ಸುಬ್ಬಣ್ಣ, ಶಾಂತರಾಜು ಬಸ್ತೀಪುರ, ರಾಘವೇಂದ್ರ, ಮಾಜಿ ಅಧ್ಯಕ್ಷ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net