26ರಂದು ಅರಣ್ಯ ಭವನಕ್ಕೆ ಮುತ್ತಿಗೆ

Published on

ಸೋಮವಾರಪೇಟೆ: ಮಾದಾಪುರ ಸಮೀಪ ಮುಕೋಡ್ಲು ಗ್ರಾಮದಲ್ಲಿನ ವೃದ್ಧ ದಂಪತಿಯ ಪೈಸಾರಿ ಜಮೀನಿನಲ್ಲಿ ಕೃಷಿ ಪಸಲು ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಸೆ.26ರಂದು ಮಡಿಕೇರಿಯಲ್ಲಿನ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ರೈತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಅಧ್ಯಕ್ಷ ಕೆ.ಬಿ.ಸುರೇಶ್ ತಿಳಿಸಿದರು.

ಇತ್ತೀಚೆಗೆ ಮುಕೊಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಎಂಬುವರ ಜಮೀನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮ ಪ್ರವೇಶ ಮಾಡಿ ಕಾಫಿ ಹಾಗೂ ಏಲಕ್ಕಿ ಗಿಡಗಳನ್ನು ಕಡಿದು ಸಂಪೂರ್ಣ ತೋಟವನ್ನು ನಾಶಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಅ.26ರ ಒಳಗೆ ಸೇವೆಯಿಂದ ಅಮಾನತುಗೊಳಿಸಬೇಕು. ತಪ್ಪಿದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

4 ಎಕರೆ ಪೈಸಾರಿ ಜಾಗದಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ಫಾರಂ 52, 53, 57ನಲ್ಲಿ ಹಕ್ಕುಪತ್ರಕ್ಕಾಗಿ ನಾಣಿಯಪ್ಪ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ನಿಯಮಬಾಹಿರವಾಗಿ ಕಾಫಿ ಮತ್ತು ಏಲಕ್ಕಿ ಗಿಡಗಳನ್ನು ಕಡಿಯಲಾಗಿದೆ. ರೈತರ ಆಹಾರ ಬೆಳೆಯನ್ನು ನಾಶ ಮಾಡುವುದು ಮಹಾ ಪಾಪದ ಕೆಲಸ ಎಂದು ಸುರೇಶ್ ದೂರಿದರು.

ಅರಣ್ಯ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಸಂತ್ರಸ್ತರಿಗೆ 30 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಮಿತಿಯಿಂದ ಬೇಡಿಕೆ ಇಟ್ಟಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೆ ಇಲಾಖೆ ಇದಕ್ಕೆ ಸ್ಪಂದಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಭವನಕ್ಕೆ ಮುತ್ತಿಗೆ ಸಂಬಂಧಪಟ್ಟಂತೆ ಸೋಮವಾರ ಒಕ್ಕಲಿಗರ ಸಮುದಾಯಭವನದಲ್ಲಿ ರೈತಪರ ಹೋರಾಟಗಾರರ ಪೂರ್ವಸಭೆ ನಡೆಸಲಾಯಿತು. ವಿವಿಧ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಪ್ರತಿಭಟನೆಗೆ ಬೆಂಬಲ ಸೂಚಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೈತ ಹೋರಾಟ ಸಮಿತಿಯ ಕಾರ್ಯದರ್ಶಿ ದಿವಾಕರ್ ಕೂತಿ , ಸಮಿತಿಯ ಮಾದಾಪುರ ಹೋಬಳಿ ಅಧ್ಯಕ್ಷ ನಾಗಂಡ ಭವಿನ್, ಸಂಘಟನಾ ಕಾರ್ಯದರ್ಶಿ ಮಿಥುನ್ ಹರಗ, ಸದಸ್ಯರ ಜಿತೇಂದ್ರಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net