26ಕ್ಕೆ ಮೇಯರ್, ಉಪಮೇಯರ್ ಚುನಾವಣೆ ; ಮೇಯರ್-ಪರಿಶಿಷ್ಟ ಪಂಗಡ, ಉಪಮೇಯರ್ ಸಾಮಾನ್ಯಮಹಿಳೆಗೆ ಮೀಸಲು

Tmk_Palike1 (1)
Published on

ತುಮಕೂರು : ಮಹಾನಗರ ಪಾಲಿಕೆ 3ನೇ ಅವಧಿಯ ಮೇಯರ್, ಉಪಮೇಯರ್ ಚುನಾವಣೆ ಫೆ.26ರಂದು ಬೆಳಗ್ಗೆ 11ಕ್ಕೆನಡೆಯಲಿದೆ. ಮೇಯರ್ ಸ್ಥಾನ ಪ.ಪಂಗಡ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವೆನಿಸಿದೆ.

ಹಾಲಿ ಮೇಯರ್, ಉಪಮೇಯರ್ ಅವಧಿ ಜ.30ಕ್ಕೆ ಅಂತ್ಯಗೊಂಡಿದ್ದು, ಫೆ.11ರಂದು ಮೀಸಲು ನಿಗದಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಮೀಸಲು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಸೋಮವಾರ ವೇಳಾಪಟ್ಟಿ ಘೋಷಿಸಿದೆ. 4 ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸಲು ಪ್ರಕಟಣೆ ಹೊರಡಿಸಿದ್ದಾರೆ.

ಏಕೈಕ ಎಸ್ಟಿ ಸದಸ್ಯ: ಪಾಲಿಕೆ 35 ಸದಸ್ಯರಲ್ಲಿ ಪ.ಪಂಗಡದ ಏಕೈಕ ಬಿಜೆಪಿ ಸದಸ್ಯರಿದ್ದು 32ನೇ ವಾರ್ಡ್ ಸದಸ್ಯ ಬಿ.ಜಿ.ಕೃಷ್ಣಪ್ಪಗೆ ಮೇಯರ್ ಸ್ಥಾನ ಒಲಿದುಬಂದಿದೆ. ಮೇಯರ್ ಸ್ಥಾನ ಬಿಜೆಪಿಗೆ ದಕ್ಕುವ ಸಾಧ್ಯತೆ ಹಿನ್ನೆಲೆಯಲ್ಲಿ ಉಪಮೇಯರ್ ಸ್ಥಾನವನ್ನು ಕಾಂಗ್ರೆಸ್-ಜೆಡಿಎಸ್ ‘ಮೈತ್ರಿ’ಗೆ ಬಿಟ್ಟುಕೊಡಲು ನಗರ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮೀಸಲು ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು, ಕಾರ್ಪೊರೇಟರ್‌ಗಳು ಫೆ.13 ರಂದು ರಹಸ್ಯ ಸಭೆ ನಡೆಸಿ ಹೈಕೋರ್ಟ್ ಮೆಟ್ಟಿಲೇರಲು ಒಮ್ಮತದ ನಿರ್ಧಾರ ಕೈಗೊಂಡಿದ್ದರು. ಸಭೆ ಮಾಹಿತಿ ಹೊರಬೀಳುತ್ತಿದ್ದಂತೆ ತರಾತುರಿಯಲ್ಲಿ ಚುನಾವಣಾ ದಿನಾಂಕ ಪ್ರಕಟಿಸಲಾಗಿದೆ. ಇದು ಕಾಂಗ್ರೆಸ್-ಜೆಡಿಎಸ್ ಕಾರ್ಪೋರೇಟರ್‌ಗಳಿಗೆ ಬರಸಿಡಿಲಿನಂತೆ ಎರಗಿದೆ.

ಪತಿರಾಯನ ಹೋರಾಟ !?: ಮೇಯರ್ ಸ್ಥಾನ ಎಸ್ಟಿಗೆ ಮೀಸಲು ನಿಗದಿಯಾಗಿದ್ದು ಇದು ಪುನರಾವರ್ತನೆಯಾಗಿದೆ. ಹಾಗಾಗಿ, ಮೀಸಲು ಬದಲಿಸುವಂತೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಹಾಲಿ ಮೇಯರ್ ಫರಿದಾಬೇಗಂ ಪತಿ ಹಫೀಜ್ ಎಲ್ಲ್ಲ ಖರ್ಚುವೆಚ್ಚ ನೋಡಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ನ್ಯಾಯಾಲಯದ ಮೆಟ್ಟಿಲೇರುವ ಮೂಲಕ 3-4 ತಿಂಗಳು ಚುನಾವಣೆ ಮುಂದೂಡುವ ಮೂಲಕ ಅಧಿಕಾರವಧಿ ವಿಸ್ತರಿಸಿಕೊಳ್ಳುವ ಪತಿರಾಯನ ಪ್ರಯತ್ನವೂ ಇದೆ.

ಅಧಿಕಾರದ ಸನಿಹಕ್ಕೆ ಬಿಜೆಪಿ!: ಅತಿಹೆಚ್ಚು 12 ಸ್ಥಾನ ಗೆದ್ದಿದ್ದರೂ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಮೊದಲ 2 ಅವಧಿಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಮೀಸಲು ಅಸ್ತ್ರ ಬಳಸಿಕೊಂಡು ಸರ್ಕಾರದ ಪ್ರಭಾವದ ಜತೆ ಬಿಜೆಪಿ ಅಧಿಕಾರದ ಸನಿಹಕ್ಕೆ ಬಂದು ನಿಂತಿದೆ. ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಮೀಸಲು ಪ್ರಶ್ನಿಸಿ, ಚುನಾವಣೆಗೆ ತಡೆಯಾಜ್ಞೆ ತಂದರಷ್ಟೇ ಬಿಜೆಪಿ ತಂತ್ರಕ್ಕೆ ಹಿನ್ನಡೆಯಲಾಗಲಿದೆ.

ಚುನಾವಣಾ ವೇಳಾಪಟ್ಟಿ: ಚುನಾವಣಾ ಸಭೆ ತಿಳಿವಳಿಕೆ ಪತ್ರ ಸಿಕ್ಕಿದ ದಿನದಿಂದ ಚುನಾವಣಾ ಸಭೆ ಪ್ರಾರಂಭವಾಗುವ 2 ಗಂಟೆವರೆಗೆ ಅಂದರೆ ಫೆ.26ರ ಬೆಳಗ್ಗೆ 8 ರಿಂದ 9 ಗಂಟೆವರೆಗೆ ಜಿಲ್ಲಾಧಿಕಾರಿ ಕಚೇರಿ ಅಥವಾ ಮಹಾನಗರ ಪಾಲಿಕೆ ಕಚೇರಿಯಲ್ಲಿ ಪ್ರಾದೇಶಿಕ ಆಯುಕ್ತರಿಗೆ ನಾಮಪತ್ರ ಸಲ್ಲಿಸಬಹುದು. ಬೆಳಗ್ಗೆ 11ಕ್ಕೆ ಚುನಾವಣಾ ಸಭೆ ಆರಂಭವಾಗಲಿದ್ದು ಮೊದಲಿಗೆ ಮೇಯರ್ ಸ್ಥಾನಕ್ಕೆ ನಂತರ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು. ತೆರಿಗೆ ನಿರ್ಧರಣೆ, ಹಣಕಾಸು ಸ್ಥಾಯಿ ಸಮಿತಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net