266 ಕರೊನಾ ಪ್ರಕರಣ ಪತ್ತೆ

carona logo
Published on

ಹುಬ್ಬಳ್ಳಿ: ಜಿಲ್ಲೆಯಲ್ಲಿ ಶುಕ್ರವಾರ 266 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಒಂದು ದಿನದ ಅತ್ಯಂತ ದೊಡ್ಡ ಸಂಖ್ಯೆಯಾಗಿದೆ.

ಒಟ್ಟು ಪ್ರಕರಣಗಳ ಸಂಖ್ಯೆ 5509ಕ್ಕೇರಿದ್ದು, ಈವರೆಗೆ 2967 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ. 2361 ಪ್ರಕರಣಗಳು ಸಕ್ರಿಯವಾಗಿವೆ. 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ 9 ಜನರು ಮೃತಪಟ್ಟಿರುವುದಾಗಿ ಶುಕ್ರವಾರ ತಿಳಿಸಿದ್ದು, ಒಟ್ಟು ಸಾವಿನ ಸಂಖ್ಯೆ 181ಕ್ಕೆ ಏರಿದೆ.

ಹುಬ್ಬಳ್ಳಿ ತಾಲೂಕಿನಲ್ಲೇ ಸತತ ಅತಿಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದು, ಜನರು ಅತ್ಯಂತ ಜಾಗರೂಕರಾಗಿರಬೇಕಾದ ಅಗತ್ಯವನ್ನು ಸಾರಿ ಹೇಳುತ್ತಿದೆ. ಶುಕ್ರವಾರದ ಪರೀಕ್ಷಾ ವರದಿ ಪ್ರಕಾರ ಹುಬ್ಬಳ್ಳಿ ನಗರ ಮತ್ತು ಕೆಲವು ಗ್ರಾಮಗಳು ಸೇರಿ ಒಟ್ಟು 66 ಪ್ರದೇಶದಲ್ಲಿ ಕರೊನಾ ಸೋಂಕಿತರು ಕಂಡುಬಂದಿದ್ದಾರೆ. ಕೆಲವು ಪ್ರದೇಶದಲ್ಲಿ ಹೆಚ್ಚು ಕಡಿಮೆ ನಿತ್ಯವೂ ವೈರಸ್ ತಗುಲಿದವರು ಕಂಡುಬರುತ್ತಿದ್ದರೆ, ಅನೇಕ ಕಡೆಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾಗಿದೆ.

ಧಾರವಾಡ ತಾಲೂಕಿನ 48 ಪ್ರದೇಶದಲ್ಲಿ ಪ್ರಕರಣ ಕಂಡುಬಂದಿದೆ. ಸರ್ಕಾರಿ ಕಚೇರಿ ಉದ್ಯೋಗಿಗಳಲ್ಲೂ ಪಾಸಿಟಿವ್ ಇರುವ ವರದಿ ಬಂದಿದೆ. ನಗರ ಪ್ರದೇಶಕ್ಕಿಂತ ಗ್ರಾಮಾಂತರದಲ್ಲಿ ಕರೊನಾ ಹಾವಳಿ ತುಸು ಕಡಿಮೆ ಇದೆ. ಕಲಘಟಗಿ ತಾಲೂಕಿನ ದುಮ್ಮವಾಡ ಪ್ಯಾಟಿ ಓಣಿ, ಜಮಿಹಾಳ, ಪೊಲೀಸ್ ಕ್ವಾರ್ಟರ್ಸ್; ಅಳ್ನಾವರ ಶಿವಾಜಿನಗರ, ನೆಹರು ನಗರ; ನವಲಗುಂದ ತಾಲೂಕಿನ ಕಳ್ಳಿಮಠ ಓಣಿ, ಮಾರುಕಟ್ಟೆ ರಸ್ತೆ, ಅಗಸಿ ಓಣಿ, ಶಲವಡಿ, ಗುಮ್ಮಗೋಳ, ಶಿರಕೋಳ, ಹೆಬ್ಬಾಳ, ಗೌಡರ ಓಣಿ; ಕುಂದಗೋಳ ತಾಲೂಕಿನ ಬರದ್ವಾಡದ ಬಸವೇಶ್ವರ ನಗರ, ತರ್ಲಘಟ್ಟ, ಕಾಳಿದಾಸ ನಗರಗಳಲ್ಲಿ ಕರೊನಾ ತಗುಲಿದವರು ಕಂಡುಬಂದಿದ್ದಾರೆ. ಗದಗ, ಹಾವೇರಿ, ಬೆಳಗಾವಿ ಜಿಲ್ಲೆಯ ಕೆಲ ಪ್ರಕರಣಗಳೂ ಧಾರವಾಡ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net