ಒಂದೇ ದಿನ 266 ಮಂದಿಗೆ ಕರೊನಾ ; ತುಮಕೂರು ಒಂದರಲ್ಲೇ 110 ಪ್ರಕರಣ

coronavirus-
Published on

ತುಮಕೂರು: ಜಿಲ್ಲೆಯಲ್ಲಿ ಗುರುವಾರ 266 ಮಂದಿಯಲ್ಲಿ ಕರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 5017ಕ್ಕೇರಿದೆ. ತುಮಕೂರು ತಾಲೂಕಿನಲ್ಲೇ 110 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ 1887ಕ್ಕೆ ಮುಟ್ಟಿದೆ. ಅಲ್ಲದೆ, ಗುರುವಾರ ತುಮಕೂರು ತಾಲೂಕಿನ ನಾಲ್ವರು ಕರೊನಾಕ್ಕೆ ಬಲಿಯಾಗಿದ್ದಾರೆ.

ಚಿಕ್ಕನಾಯಕನಹಳ್ಳಿಯಲ್ಲಿ 32, ತಿಪಟೂರು 29, ಗುಬ್ಬಿ 24, ಶಿರಾ 16, ಪಾವಗಡ 16, ಕೊರಟಗೆರೆ 14, ತುರವೇಕೆರೆ 11 ಹಾಗೂ ಮಧುಗಿರಿ 9, ಕುಣಿಗಲ್​ನಲ್ಲಿ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕು ಎಲ್ಲೆಡೆ ವ್ಯಾಪಿಸುತ್ತಿದ್ದು ಜನರು ಎಲ್ಲ ಮಾರ್ಗಸೂಚಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ.

174 ಮಂದಿ ಗುಣಮುಖ: ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 174 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 3626 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲೀಗ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು 1240 ಪ್ರಕರಗಳಿವೆ. ಜಿಲ್ಲಾ ಆಸ್ಪತ್ರೆಯಲ್ಲಿ 16 ಮಂದಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 25 ಮಂದಿ ಒಟ್ಟು 41 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸ್ವಲ್ಪಮಟ್ಟಿಗೆ ಆತಂಕ ಹೆಚ್ಚಿಸಿದೆ.

ತುಮಕೂರು ತಾಲೂಕಿನ ನಾಲ್ವರು ಕರೊನಾಕ್ಕೆ ಬಲಿಯಾಗಿದ್ದಾರೆ. ತುಮಕೂರು ತಾಲೂಕಿನ ಬೊಮ್ಮೆನಹಳ್ಳಿಯ 75 ವರ್ಷದ ವೃದ್ಧ ತೀವ್ರ ಉಸಿರಾಟ, ಜ್ವರ, ನೆಗಡಿ, ಕೆಮ್ಮು, ಮೈಕೈ ನೋವಿನಿಂದ ಬಳಲುತ್ತಿದ್ದು ಆ.24 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇನ್ನೂ ತುಮಕೂರು ನಗರದ ಎಸ್​ಎಸ್ ಪುರಂನ 74 ವರ್ಷದ ವೃದ್ಧೆ, ಎಸ್​ಐಟಿ ಬಡಾವಣೆಯ 67 ವರ್ಷದ ವೃದ್ಧ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮರಳೂರು ದಿಣ್ಣೆಯ 36 ವರ್ಷದ ವ್ಯಕ್ತಿ ಜ್ವರ, ಉಸಿರಾಟ ತೊಂದರೆ, ಕೆಮ್ಮು, ಮೈಕೈ ನೋವಿನಿಂದ ಬಳಲುತ್ತಿದ್ದು ಆ.20 ರಂದು ಶ್ರೀದೇವಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net