ಎಲ್ಲರೂ ಪ್ರೀತಿ, ಬಾಂಧವ್ಯದಿಂದ ಬಾಳಲಿ

16ATHANIGRAMIN1
Published on

ಅಥಣಿ ಗ್ರಾಮೀಣ: ಶಾಂತಿ, ಸಹನೆ, ಅಹಿಂಸೆ ಪರಿಪಾಲನೆ ಮಾಡುವುದು ಜೈನ ಧರ್ಮದ ಪ್ರಮುಖ ಧ್ಯೇಯವಾಗಿದೆ ಎಂದು ಪಪೂ ಬಾಲಾಚಾರ್ಯ ಧರ್ಮಪ್ರಭಾವಕ ಶ್ರೀ 108 ಸಿದ್ಧಸೇನ ಮುನಿ ಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಜರುಗುತ್ತಿರುವ ಪಂಚಕಲ್ಯಾಣ ಮಹಾಮಹೋತ್ಸವ, ತಥಾ ವಿಶ್ವಶಾಂತಿ ಮಹಾಯಜ್ಞ ಸಭಾ ಮಂಟಪವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ಎಲ್ಲರೂ ಪರಸ್ಪರ ಪ್ರೀತಿ, ಬಾಂಧವ್ಯದಿಂದ ಬಾಳುವಂತೆ ಮಾಡುವುದು ಪಂಚಕಲ್ಯಾಣ ಮಹೋತ್ಸವದ ಉದ್ದೇಶವಾಗಿದೆ. ಜೈನ ಧರ್ಮದ ಸಂಪ್ರದಾಯಗಳನ್ನು ಪ್ರತಿಯೊಬ್ಬರೂ ಆಚರಿಸಬೇಕು. ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಭಗವಾನ್ ತೀರ್ಥಂಕರ ಆಶಯದಂತೆ ದೇಶದಲ್ಲಿ ಶಾಂತಿ ನೆಲೆಸಬೇಕು ಎಂದರು.

ವಿಶ್ವ ಕಲ್ಯಾಣದ ಜತೆಗೆ ಆತ್ಮಕಲ್ಯಾಣ ಮಾಡಿಕೊಳ್ಳಬೇಕು. ಯುವಜನಾಂಗಕ್ಕೆ ಧರ್ಮ ಜಾಗೃತಿ ಮೂಡಿಸುವುದು ಪ್ರತಿಷ್ಠಾ ಮಹೋತ್ಸವ ಪ್ರಮುಖ ವಿಷಯವಾಗಿದೆ. ಪ್ರತಿಯೊಬ್ಬರೂ ಶ್ರದ್ಧೆ, ಭಕ್ತಿಯಿಂದ ಪಾಲ್ಗೊಂಡು ಕೃತಾರ್ಥರಾಗಬೇಕು ಎಂದು ಸಲಹೆ ನೀಡಿದರು.

ಝುಂಜರವಾಡ ಗ್ರಾಮಗೌರವ ಪಪೂ ಶ್ರೀ 105 ಅಕಲಂಕಸೇನ ಮಹಾರಾಜರು ಮಾತನಾಡಿ, ಮುನಿ ಮಹಾರಾಜರ ದರ್ಶನಾಶೀರ್ವಾದ ಪಡೆಯುವುದು ಪುಣ್ಯದ ಕೆಲಸ. ಪೂಜ್ಯ, ತ್ಯಾಗಿ, ಮುನಿಗಳಿಂದ ಧರ್ಮೋಪದೇಶ, ವದ್ವಾನರಿಂದ ವ್ಯಾಝ್ಯಾನ ಅನೇಕ ಸಂಸ್ಕಾರಗಳನ್ನು ಪಡೆದುಕೊಳ್ಳುವಿಕೆಗೆ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ ನೆಪವಾಗಿದೆ. ಭಜನೆ, ನಾಟಕ, ನೃತ್ಯ ಸೇರಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡು ಪಾವನರಾಗಬೇಕು ಎಂದರು.

ಕಣ್ಮನ ಸೆಳೆದ ಮೆರವಣಿಗೆ: ಬೆಂಡಬಾಜಿ, ಕರಡಿಮಜಲು, ವೇಷಧಾರಿಗಳು, ಹುಲಿಕುಣಿತದೊಂದಿಗೆ ಜೈನ ಬಸದಿಯಿಂದ ಗ್ರಾಮದ ಪ್ರಮುಖ ಬಿದಿಗಳಲ್ಲಿ ಶ್ರಾವಕ, ಶ್ರಾವಕಿಯರು ಕುಂಭೋತ್ಸವದೊಂದಿಗೆ ಸಭಾಮಂಟಪಕ್ಕೆ ಆಗಮಿಸಿದರು. ಆನೆ, ಕುದುರೆ ಮೇಲೆ ಕುಳಿತ ಯಜಮಾನರ ಆಗಮನ, ಸುಪ್ರಭಾತ, ಸ್ತೋತ್ರ, ನಾದಿಮಂಗಲ, ಧರ್ಮಾಚಾರ್ಯ ಸೇರಿ ಅನೇಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.

ಪಪೂ ಶ್ರೀ 108 ವಾತ್ಸಲ್ಯಮೂರ್ತಿ ಸಮುದ್ರಸೇನ ಮುನಿಮಹಾರಾಜರು, ಪಪೂ ಶ್ರೀ 108 ಮಲ್ಲಿಸೇನ ಮುನಿಮಹಾರಾಜರು, ಪಪೂ ಶ್ರೀ 108 ಶ್ರವಣರತ್ನ ಆಚಾರ್ಯ ಸುಬಲಸಾಗರ ಮುನಿಮಹಾರಾಜರು, ಬಾಹುಬಲಿ ಉಪಾಧ್ಯೆ, ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಿತಿ, ಸಮಸ್ತ ದಿಗಂಬರ ಜೈನ ಸಮುದಾಯದ ಸದಸ್ಯರು, ವೀರಸೇವಾದಳ ಹಾಗೂ ಝುಂಜರವಾಡ ಶಾರದಾದೇವಿ ಮಹಿಳಾ ಮಂಡಳದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net