

ಮೈಸೂರು: ಕೆಲಸದಿಂದ ತೆಗೆದಿರುವ 260 ಕಾರ್ಮಿಕರಿಗೆ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ರೀಡ್ ಆ್ಯಂಡ್ ಟೇಲರ್ ಕಾರ್ಖಾನೆಯ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಈ ಕಾರ್ಖಾನೆಯಲ್ಲಿನ 260 ಕಾರ್ಮಿಕರನ್ನು ಕೆಲಸದಿಂದ ಕೈಬಿಟ್ಟಿರುವುದು ಖಂಡನೀಯ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 820 ಕಾರ್ಮಿಕರು 22 ವರ್ಷಗಳಿಂದ ಈ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೋವಿಡ್ ನೆಪದಲ್ಲಿ 2020ರ ಮಾ.17ರಂದು ವೇತನ ಸಹಿತ ರಜೆ ಘೋಷಣೆ ಮಾಡಲಾಯಿತು. ಬಳಿಕ ಕಾರ್ಖಾನೆ ದಿವಾಳಿಯ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಎಲ್ಲ ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ಕಾನೂನುಬಾಹಿರವಾಗಿ ವಿಸರ್ಜಿಸಲಾಗಿದೆ ಎಂದು ಕಿಡಿಕಾರಿದರು.
ಈ ಹಿಂದೆ ಮಾಲೀಕರೇ ಹೊಸ ಹೆಸರಿನಲ್ಲಿ ಕಂಪನಿಯನ್ನು ಖರೀದಿಸಿ ಕೆಲ ಕಾರ್ಮಿಕರಿಂದ ನಿಯಮಬಾಹಿರವಾಗಿ ಒಪ್ಪಂದ ಮಾಡಿಕೊಂಡು 565 ಜನರನ್ನು ಯಾವುದೇ ಮಾನದಂಡ ಪಾಲನೆ ಮಾಡದೆ ನೇಮಿಸಿಕೊಂಡಿದ್ದಾರೆ. ಉಳಿದ 260 ಕಾರ್ಮಿಕರಿಗೆ ಕೆಲಸ ನಿರಾಕರಿಸಿ ಬೀದಿ ಪಾಲು ಮಾಡಿದ್ದಾರೆ ಎಂದು ಆರೋಪಿಸಿದರು.
ಇದೀಗ 250 ಕಾರ್ಮಿಕರಿಗೆ ಕೆಲಸವೂ ಇಲ್ಲ, ಪರಿಹಾರವೂ ಇಲ್ಲದಂತಾಗಿದೆ. ಕೆಲಸ ಕಳೆದುಕೊಂಡು ಹೋರಾಟ ಮಾಡುತ್ತಿರುವ ಕಾರ್ಮಿಕರಿಗೆ ಕೆಲಸ ನೀಡಿಲ್ಲ. ಬದಲಿಗೆ ಹೊರರಾಜ್ಯದಿಂದ ಗುತ್ತಿಗೆ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಲಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.