

ಮೂಡಿಗೆರೆ: ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿಯಿಂದ ಜನ ರೋಸಿಹೋಗಿದ್ದಾರೆ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರಕ್ಕಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಇನ್ನು ಮೂಗ್ತಿಹಳ್ಳಿಯಿಂದ ಮೂಡಿಗೆರೆ, ಹ್ಯಾಂಡ್‌ಪೋಸ್ಟ್‌ವರೆಗೆ 26 ಕಿಮೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಲು ತಯಾರಿ ನಡೆದಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮೂಲರಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಿರುವ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಪರಿಶೀಲಿಸಿದ ನಂತರ ಊರುಬಗೆ ಗ್ರಾಪಂ ಕಚೇರಿ ಸಭಾಂಗಣದಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಮೂಡಿಗೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಶಿಶಿಲ-ಬೈರಾಪುರ ರಸ್ತೆ ನಿರ್ಮಾಣಕ್ಕೆ ಹಿಂದೆ ಸರ್ವೇ ನಡೆದಿದ್ದು, ಕಾಮಗಾರಿ ಆರಂಭಿಸುವಷ್ಟರಲ್ಲಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಶಿಶಿಲ-ಬೈರಾಪುರ ಹೊಸ ರಸ್ತೆ ಕಾಮಗಾರಿ ಆರಂಭವಾದರೆ ಹತ್ತಾರು ಹಳ್ಳಿಗಳು, ಪ್ರಮುಖ ನದಿಗಳು, ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗುವ ಜತೆಗೆ ಕಾಡುಪ್ರಾಣಿಗಳು ನೆಲೆ ಕಳೆದುಕೊಳ್ಳುತ್ತವೆ ಎಂದರು.
ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಲಿದೆ ಎಂದು ವಾದಿಸುತ್ತಿರುವ ಪರಿಸರವಾದಿಗಳ ಮನವೊಲಿಸಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿ ರಸ್ತೆ ಕಾಮಗಾರಿ ಕಡತ ಮರುಪರಿಶೀಲಿಸುವಂತೆ ಮನವಿ ಮಾಡಲಾಗುವುದು. ಊರುಬಗೆ ವ್ಯಾಪ್ತಿಯ ರೈತರ ನಿಯೋಗವನ್ನು ಜಿಲ್ಲಾಧಿಕಾರಿ ಬಳಿ ಕರೆದೊಯ್ದು ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ಊರುಬಗೆ, ಬೈರಾಪುರ, ಹೊಸಕೆರೆ, ಗೌಡಳ್ಳಿ, ದೇವರಮನೆ, ಮೂಲರಹಳ್ಳಿ, ಗುತ್ತಿ, ಕೊಟ್ಟಿಗೆಹಾರ, ಬಣಕಲ್ ಈ ಭಾಗದಲ್ಲಿ ಪ್ರತಿ ವರ್ಷ ಅತಿಯಾದ ಮಳೆಯಿಂದ ರೈತರ ಬೆಳೆ ನಾಶವಾಗುತ್ತಿದೆ. ಕಾಡಾನೆ ಮತ್ತು ಕಾಡುಕೋಣಗಳ ಹಾವಳಿಯಿಂದ ಕಂಗೆಟ್ಟ ರೈತರು ಗದ್ದೆ, ತೋಟಗಳನ್ನು ಪಾಳುಬಿಟ್ಟು ಕುಟುಂಬದವರನ್ನು ಬಿಟ್ಟು ಮಹಾನಗರಗಳ ಕಡೆಗೆ ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ರಾಜೇಂದ್ರಕುಮಾರ್ ಕಠಾರಿಯಾ ಅವರ ವರದಿ ಆಧರಿಸಿ ಗೋಣಿಬೀಡು ಹೋಬಳಿಯಲ್ಲಿ ರೈತರ ಅಕ್ರಮ ಸಕ್ರಮ ಅರ್ಜಿಗಳನ್ನು ಸರ್ಕಾರ ವಜಾಗೊಳಿಸಿದೆ. ರೈತರ ಸಾಲ ಮರುಪಾವತಿಗೆ ಬ್ಯಾಂಕ್ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ವಜಾಗೊಂಡಿರುವ ಅರ್ಜಿಗಳನ್ನು ಪರಿಗಣಿಸಿ ಆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಅದೇ ರೈತರಿಗೆ ನೀಡಬೇಕೆಂದು ಜಿಲ್ಲಾಧಿಕಾರಿಗೆ ಸೂಚಿಸುವಂತೆ ಗ್ರಾಮಸ್ಥರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಒತ್ತಾಯಿಸಿದರು.
ಪಶ್ಚಿಮಘಟ್ಟದ ಸಾಲಿನಲ್ಲಿ ಪ್ರತಿ ವರ್ಷ 400 ರಿಂದ 450 ಇಂಚು ಮಳೆಯಾಗುತ್ತದೆ. ಕಾಫಿ, ಅಡಕೆ, ಬಾಳೆ, ಕಾಳುಮೆಣಸಿನ ಬೆಳೆ ಪ್ರತಿವರ್ಷ ನೆಲ ಕಚ್ಚುತ್ತದೆ. ರಸ್ತೆ, ಸೇತುವೆ, ಮೋರಿ, ಕೊಚ್ಚಿಹೋಗುತ್ತವೆ. ಭೂಕುಸಿತ ನಿರಂತರವಾಗಿ ನಡೆಯುತ್ತಿದೆ. ಪಶ್ಚಿಮ ಘಟ್ಟದಲ್ಲಿ ಅತಿ ಹೆಚ್ಚು ಮಳೆ ಆಗುವ ಪ್ರದೇಶವನ್ನು ಶಾಶ್ವತ ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ ಎನ್‌ಡಿಆರ್‌ಎ್ನಿಂದ ವಿಶೇಷ ಪ್ಯಾಕೇಜ್ ಘೋಷಿಸಿ ರೈತರಿಗೆ ನೆರವಾಗಬೇಕು ಎಂದು ಗ್ರಾಮಸ್ಥರು ಸಂಸದರನ್ನು ಒತ್ತಾಯಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ನಚಿಕೇತ್, ಸಂತೋಷ್, ರವೀಂದ್ರ, ಮಾಜಿ ಉಪಾಧ್ಯಕ್ಷ ಸಂಜೀವ ಪ್ರಸಾದ್, ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ, ಗೋಣಿಬೀಡು ಹೋಬಳಿ ಬಿಜೆಪಿ ಅಧ್ಯಕ್ಷ ಭರತ್, ಬಡಕಲ್ ಹೋಬಳಿ ಅಧ್ಯಕ್ಷ ಯತೀಶ್, ಮುಖಂಡರಾದ ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಸುನಿಲ್, ಭಾರತಿ, ಶರತ್, ಸಾಗರ್, ಎಚ್.ಎಲ್.ಪ್ರಶಾಂತ್, ಎಂ.ಕೆ.ಸದಾಶಿವ, ದಿನೇಶ್, ರಘು, ರಂಜಿತ್, ಪಿಡಿಒ ಇಂತೇಶ್ ಇತರರಿದ್ದರು.