ಬೆಂಗಳೂರು ಕೃಷಿ ವಿವಿಯಿಂದ 26 ಹೊಸ ತಾಂತ್ರಿಕತೆ ಶೋಧ

gkvk yantra
Published on

ಆರ್​​​.ತುಳಸಿಕುಮಾರ್​​ ಬೆಂಗಳೂರು

ಹವಾಮಾನ ವೈಪರೀತ್ಯದಿಂದ ವ್ಯವಸಾಯ ಕ್ಷೇತ್ರದಲ್ಲಿ ಹಲವು ಬದಲಾವಣೆ ಆಗುತ್ತಿದ್ದು, ರೈತರು ಕೈಗೊಳ್ಳುವ ಕೃಷಿ ಚಟುವಟಿಕೆಗೆ ಕೆಲವೊಂದು ಅಡ್ಡಿ ಎದುರಾಗಿವೆ. ಇಂತಹ ಸಮಸ್ಯೆಗಳನ್ನು ನಿವಾರಿಸಿ ಅನ್ನದಾತರಿಗೆ ತಲುಪಿಸಲೆಂದೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು (ಯುಎಎಸ್‌ಬಿ) ಸುಧಾರಿತ ಬೇಸಾಯ ಪದ್ಧತಿಗೆ ಸಂಬಂಧಿಸಿದ 26 ಹೊಸ ತಾಂತ್ರಿಕತೆಗಳನ್ನು ಶೋಧಿಸಿದೆ.

ಬದಲಾದ ಪರಿಸ್ಥಿತಿಯಲ್ಲಿ ರೈತರು ಕೂಲಿ ಕಾರ್ಮಿಕರ ಕೊರತೆ ಎದುರಿಸುವ ಜತೆಗೆ ಹಾಕಿದ ಬಂಡವಾಳವನ್ನು ಪಾವಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಜತೆಗೆ ಸಕಾಲದಲ್ಲಿ ಬೆಳೆ ಕೈಸೇರದೆ ಕೈಸುಟ್ಟುಕೊಳ್ಳುವಂತಹ ಪರಿಸ್ಥಿತಿಯಿಂದಾಗಿ ನಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಇಂತಹ ಕ್ಲಿಷ್ಟ ಹಾಗೂ ಸಂಕೀರ್ಣ ಸ್ಥಿತಿಯಲ್ಲಿ ಹೊಸ ತಾಂತ್ರಿಕತೆಯನ್ನು ಬಳಸಿಕೊಂಡು ಬೆಳೆ ಕೈತಪ್ಪದಂತೆ ರಕ್ಷಿಸಿಕೊಳ್ಳುವ ಚಾಣಾಕ್ಷತನ ಕೃಷಿಯಲ್ಲಿ ಲಾಭ ತಂದುಕೊಡಲಿದೆ.

ಸುಧಾರಿತ ಬೇಸಾಯ ಪದ್ಧತಿಗೆ ಸಂಬಂಧಿಸಿದ ವಿವಿಯು ಮೂರು ವಿಧದಲ್ಲಿ ತಾಂತ್ರಿಕತೆಗಳನ್ನು ಶೋಧಿಸಿ ಸಿದ್ಧಪಡಿಸಿದೆ. ಇವುಗಳಲ್ಲಿ ಮೌಲ್ಯವರ್ಧಿತ ಪದಾರ್ಥಗಳಿಗೆ ಒಪ್ಪುವ 10, ಕೃಷಿ ಇಂಜಿನಿಯರಿಂಗ್ ತಂತ್ರಜ್ಞಾನದಲ್ಲಿ 7 ಹಾಗೂ ವಾಣಿಜ್ಯೀಕರಣಕ್ಕೆ 17 ತಂತ್ರಜ್ಞಾನಗಳನ್ನು ಶೋಧಿಸಿ ಶಿಾರಸು ಮಾಡಲಾಗಿದೆ. ಇವುಗಳನ್ನು ಮುಂಬರುವ ಕೃಷಿ ಮೇಳದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ವಿವಿ ನಿರ್ಧರಿಸಿದೆ.

ಯಂತ್ರೋಪಕಣಕ್ಕೆ ಒತ್ತು:

ಪ್ರಸ್ತುತ ಕೃಷಿ ಕಾರ್ಯವನ್ನು ಇಡೀ ಕುಟುಂಬ ಪಾಲ್ಗೊಂಡರೂ ಲಾಭ ಸಿಗುತ್ತಿಲ್ಲ. ಮಕ್ಕಳು ವಿದ್ಯಾಭ್ಯಾಸಕ್ಕೆ ಹೋದಲ್ಲಿ ಪತಿ-ಪತ್ನಿಯೇ ಬೇಸಾಯ ಮಾಡಬೇಕಿದೆ. ಕೂಲಿಯಾಳುಗಳು ಸಿಗದ ಕಾರಣ ಕಡಿಮೆ ಹಿಡುವಳಿಯಲ್ಲೇ ವ್ಯವಸಾಯ ಮಾಡಬೇಕಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಯಾಂತ್ರಿಕರಣಕ್ಕೆ ಒತ್ತು ನೀಡುವ ಸಲಹೆಯನ್ನು ಕೃಷಿ ವಿವಿಯು ಹಿಂದಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. ಪ್ರತಿವರ್ಷವೂ ಹೊಸ ತಾಂತ್ರಿಕತೆಯನ್ನು ಬಿಡುಗಡೆ ಮಾಡಿ ರೈತರಿಗೆ ಉಪಯೋಗವಾಗುವ ಬೇಸಾಯ ಕ್ರಮಗಳನ್ನು ಹಸ್ತಾಂತರಿಸುತ್ತಿದೆ. ಇದರು ಅನ್ನದಾತರಿಗೆ ಉಪಯೋಗವಾಗುತ್ತಿದ್ದು, ಸರಳ ಹಾಗೂ ಕೈಗೆಟಕುವ ದರದಲ್ಲಿ ಯಂತ್ರಗಳನ್ನು ಒದಗಿಸುವಂತೆ ಕೃಷಿ ಮೇಳದಲ್ಲಿ ರೈತರು ಸಲಹೆ ನೀಡಿದ್ದರು.

ಆ ಬಳಿಕ ವಿವಿಯ ಕೃಷಿ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸೇರಿ ಹೊಸ ತಾಂತ್ರಿಕತೆಗಳನ್ನು ಸಿದ್ಧಪಡಿಸಿದ್ದಾರೆ. ಈ ಬಾರಿ ಜೇನುತುಪ್ಪ ತೆಗೆಯುವ ಯಂತ್ರ, ಕೈಚಾಲಿತ ರಾಗಿ ಕೂರಿಗೆ, ಹರಳು, ಸಿಪ್ಪೆ ಸುಲಿಯುವ ಯಂತ್ರ, ಮುಸುಕಿನ ಜೋಳದ ಸಿಪ್ಪೆ ಸುಲಿಯುವ ಯಂತ್ರ, ಸೂರ್ಯಕಾಂತಿ ಒಕ್ಕಣೆ ಹಾಗೂ ಸಿಪ್ಪೆ ಸುಲಿಯುವ ಯಂತ್ರಗಳನ್ನು ರೂಪಿಸಿದ್ದು, ಕೃಷಿ ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಮೌಲ್ಯವರ್ಧನೆಯಿಂದ ಲಾಭ ಹೆಚ್ಚು:

ವಿವಿಯು ಕೃಷಿಯ ಜತೆಗೆ ಬೇಕರಿ ವಿಭಾಗದಲ್ಲಿ ಮೌಲ್ಯವರ್ಧನೆ ಪದಾರ್ಥಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಅದರಿಂದ ಲಾಭ ಮಾಡಿಕೊಳ್ಳುವ ವಿಧಾನಗಳನ್ನು ರೂಪಿಸಿದೆ. ಕೆಲ ವರ್ಷಗಳಿಂದ ರೈತನ ಮಕ್ಕಳು ಬೇಕರಿ ಉತ್ಪನ್ನಗಳ ತಯಾರಿಕೆ ವಿಧಾನದಲ್ಲಿ ತರಬೇಥಿ ಪಡೆದು ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ. ಇಂತಹವರಿಗೆ ಹೊಸ ಪದಾರ್ಥಗಳನ್ನು ಶೋಧಿಸಿ ತಲುಪಿಸಲಾಗುತ್ತಿದೆ. ಇತ್ತೀಚಿಗೆ ಸಾವಯವ ಉತ್ಪನ್ನ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿದೆ. ಇದನ್ನು ಗಮನಿಸಿ ಸಿರಿಧಾನ್ಯಗಳ ತ್ವರಿತ ಇಡ್ಲಿ ಮಿಶ್ರಣ, ಮಸಾಲೆಯುಕ್ತ ಸಿರಿಧಾನ್ಯಗಳ ಮಿಶ್ರಣ, ಸ್ಟೀವಿಯಾ ಆಧಾರಿತ ಸಿಹಿ/ಉಪ್ಪಿನ ಬಿಸ್ಕತ್ತು, ಹಣ್ಣು ಆಧಾರಿತ ಕೇಕ್ ಪ್ರಿಮಿಕ್ಸ್ ಸಹಿತ 10 ಪದಾರ್ಥಗಳ ತಾಂತ್ರಿಕತೆಯನ್ನು ರೈತರು ಹಾಗೂ ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ವಿವಿಯಿಂದ ರೂಪಿಸುವ ಹೊಸ ತಾಂತ್ರಿಕತೆಯು ರೈತರಿಗೆ ಹೆಚ್ಚಿನ ಉಪಯೋಗ ಆಗಲಿದೆ. ಕಡಿಮೆ ಹಿಡುವಳಿ ಹಾಗೂ ಕೂಲಿಯಾಳುಗಳ ಕೊರತೆ ನಿವಾರಿಸಲು ನೂತನ ಯಂತ್ರೋಪಕರಣಗಳನ್ನು ಶೋಧಿಸಲಾಗಿದೆ. ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನಗಳಿಗೆ ಮೌಲ್ಯವರ್ಧನೆಗೆ ಒಳಪಡಿಸಿದರೆ ರೈತರಿಗೆ ಅಧಿಕ ಆದಾಯ ಇದೆ. ಅಗ್ರಿ ನವ್ಯೋದಮಿಗಳಿಗೆ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ವಿವಿ ಆವಿಷ್ಕಾರಗಳು ನೆರವಿಗೆ ಬರಲಿದೆ.

- ಕೆ.ಪಿ.ರಘುಪ್ರಸಾದ್, ಕೃಷಿ ಮಾಹಿತಿ ಕೇಂದ್ರದ ಮುಖ್ಯಸ್ಥ, ಯುಎಎಸ್‌ಬಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net